
ಉಡುಪಿ : ರಾಜ್ಯ ಪೊಲೀಸ್ ಇಲಾಖೆಯಿಂದ ಸೇವಾ ಶ್ರೇಷ್ಠತೆಗಾಗಿ ಈವರ್ಷ ಪ್ರಾರಂಭಿಸಲಾದ ‘ಡಿಜಿ ಮತ್ತು ಐಜಿಪಿ ಪ್ರಶಂಸಾ ಪದಕ’ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ನಾಲ್ವರು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಯ್ಕೆಯಾಗಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಕೆ. ಅರುಣ್, ಮಲ್ಪೆ ಕರಾವಳಿ ಕಾವಲು ಪೊಲೀಸ್ ಠಾಣೆಯ ಎಸ್ಸೈ ವೈಲೆಟ್ ಫೆಮಿನಾ, ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಗುರುದಾಸ್ ಮತ್ತು ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆರ್ಮ್ಡ್ ಹೆಡ್ ಕಾನ್ಸ್ಟೇಬಲ್ ಸಂತೋಷ್ ಗುಲ್ವಾಡಿ ಅವರುಗಳು ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಈ ಪ್ರಶಸ್ತಿಯು ಪೊಲೀಸ್ ಇಲಾಖೆಯಲ್ಲಿ ಅಸಾಧಾರಣ ಸೇವೆ, ಧೈರ್ಯ ಮತ್ತು ನಿಷ್ಠೆಯನ್ನು ಪ್ರದರ್ಶಿಸಿದ ಸಿಬ್ಬಂದಿಗಳನ್ನು ಗುರುತಿಸುವುದಾಗಿದೆ. ರಾಜ್ಯದಾದ್ಯಂತ ಇದೇ ಮೊದಲ ಬಾರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಆಯ್ಕೆಯಾದವರಿಗೆ ಮೇ ೨೧ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಗೌರವಿಸಲಾಗುವುದು.
ಪ್ರಶಸ್ತಿ ಪಡೆಯುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಕರ್ತವ್ಯದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದರಿಂದ ಈ ಗೌರವಕ್ಕೆ ಭಾಜನರಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ಮೂಲಗಳು ತಿಳಿಸಿವೆ.