

ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಪರಿಕಲ್ಪನೆಯ ‘ರಾಮರಾಜ್ಯ ಯೋಜನೆ’ಯಡಿ ಉಡುಪಿ ಜಿಲ್ಲೆ ನೀಲಾವರ ಗ್ರಾಮದ ಸತೀಶ್ ನಾಯ್ಕ ಅವರ ಕುಟುಂಬಕ್ಕಾಗಿ ನೂತನ ಗೃಹ ನಿರ್ಮಾಣ ಮಾಡಲಾಗಿದೆ. ಶ್ರೀಮಠದ ಆಶ್ರಯದಲ್ಲಿ ಹಾಗೂ ದಾನಿಗಳ ಆರ್ಥಿಕ ನೆರವಿನಿಂದ ಈ ಮನೆಯನ್ನು ಕಟ್ಟಲಾಗಿದ್ದು, ಶ್ರೀಮಠದ ಪರವಾಗಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಗೃಹ ಪ್ರವೇಶ ನೆರವೇರಿಸಿದರು. ಈ ನೂತನ ನಿವಾಸಕ್ಕೆ ‘ಶ್ರೀರಾಮಸದನ’ ಎಂಬ ಪುಣ್ಯನಾಮವನ್ನು ನೀಡಿದರು.
ಈ ಸಂದರ್ಭದಲ್ಲಿ ಶ್ರೀಪಾದರು ಗೃಹಸ್ಥರನ್ನು ಆಶೀರ್ವದಿಸಿ, ಮನೆಯಲ್ಲಿ ಸದಾ ಭಜನೆ-ಸಂಕೀರ್ತನೆ ನಡೆಯಲಿ, ಶ್ರೀರಾಮನ ನಾಮಸ್ಮರಣೆ ಆಗಲಿ ಎಂದು ಸಲಹೆ ನೀಡಿದರು. ಕುಟುಂಬದ ಸದಸ್ಯರಿಗೆ ಶ್ರೀರಾಮನ ಸಂಕೀರ್ತನೆ ಹಾಡಿಸಿ ತಾವೂ ಹಾಡಿದರು.
ಈ ಮನೆ ನಿರ್ಮಾಣಕ್ಕೆ ಆಸ್ಟ್ರೇಲಿಯಾದ ಯೋಗಗುರು ರಾಜೇಂದ್ರ ಎಂಕಮೂಲೆಯವರು ಪ್ರಮುಖ ದಾನಿಯಾಗಿ ಆರ್ಥಿಕ ನೆರವು ನೀಡಿದ್ದಾರೆ. ಗೃಹ ಉದ್ಘಾಟನಾ ಸಮಾರಂಭದಲ್ಲಿ ವಾಸುದೇವ ಭಟ್ ಪೆರಂಪಳ್ಳಿ, ಅಶ್ವಿನ್ ಹಾಗೂ ಮಠದ ಅನೇಕ ಭಕ್ತರು ಭಾಗವಹಿಸಿದ್ದರು.