
ಉಡುಪಿ: ಐತಿಹಾಸಿಕ ಶೀರೂರು ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಉಡುಪಿ ನಗರದಾದ್ಯಂತ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಜಿಲ್ಲಾಡಳಿತವು ಮಹತ್ವದ ಕ್ರಮ ಕೈಗೊಂಡಿದ್ದು, ಎರಡು ದಿನಗಳ ಕಾಲ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ.
ಉಡುಪಿ ಶ್ರೀ ಕೃಷ್ಣ ಮಠದ ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪರ್ಯಾಯೋತ್ಸವವು ಜ. 17 ಮತ್ತು 18 ರಂದು ಅದ್ಧೂರಿಯಾಗಿ ನಡೆಯಲಿದೆ. ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಮತ್ತು ಗಣ್ಯರು ನಗರಕ್ಕೆ ಆಗಮಿಸಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಧಿಕಾರಿ ಡಾ. ಸ್ವರೂಪ ಟಿ.ಕೆ. ಅವರು ಮದ್ಯ ನಿಷೇಧದ ಆದೇಶ ನೀಡಿದ್ದಾರೆ.
ಜ. 17 ರ ಬೆಳಿಗ್ಗೆ 10:00 ಗಂಟೆಯಿಂದ ಜ. 18 ರ ಸಂಜೆ 06:00 ಗಂಟೆಯವರೆಗೆ ಈ ನಿಷೇಧ ಜಾರಿಯಲ್ಲಿರಲಿದೆ. ಉಡುಪಿ ನಗರಸಭೆ ವ್ಯಾಪ್ತಿಯ ಜೊತೆಗೆ ಉದ್ಯಾವರ, ಕೊರಂಗ್ರಪಾಡಿ, ಅಲೆವೂರು, ಹಿರೇಬೆಟ್ಟು, ಅಂಬಲಪಾಡಿ, ಕುತ್ಪಾಡಿ, ಕಡೆಕಾರು, ಕಿದಿಯೂರು, ಮೂಡುತೋನ್ಸೆ ಮತ್ತು ಪಡುತೋನ್ಸೆ ಸೇರಿದಂತೆ ಸುಮಾರು 15 ಕಿ.ಮೀ ವ್ಯಾಪ್ತಿಯ ಗ್ರಾಮಗಳಲ್ಲೂ ಮದ್ಯ ಮಾರಾಟ ಬಂದ್ ಆಗಲಿದೆ. ಬಾರ್, ರೆಸ್ಟೋರೆಂಟ್ ಹಾಗೂ ವೈನ್ ಶಾಪ್‌ಗಳು ಕಡ್ಡಾಯವಾಗಿ ಮುಚ್ಚಿರಬೇಕು ಎಂದು ಸೂಚಿಸಲಾಗಿದೆ. ಒಂದು ವೇಳೆ ಜಿಲ್ಲಾಡಳಿತದ ಈ ಆದೇಶವನ್ನು ಉಲ್ಲಂಘಿಸಿ ಮದ್ಯ ಮಾರಾಟ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.



































