
ಉಡುಪಿ: ನಗರದ ಕ್ರಿಶ್ಚಿಯನ್ ಪಿಯು ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ “ಸಮಾಧಾನ ಮಹೋತ್ಸವ” ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಹಿಂದೂ ಜಾಗರಣ ವೇದಿಕೆಯ 38 ಮಂದಿ ಕಾರ್ಯಕರ್ತರ ವಿರುದ್ಧ ಉಡುಪಿ ನಗರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮಾರ್ಚ್ 20 ರಿಂದ 22 ರವರೆಗೆ ನಡೆಯಲಿರುವ ಈ ಧಾರ್ಮಿಕ ಕಾರ್ಯಕ್ರಮಕ್ಕೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಫೆಲೋಶಿಪ್ ಆಫ್ ಉಡುಪಿ ಡಿಸ್ಟ್ರಿಕ್ಟ್ ಚರ್ಚ್ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಪ್ರಖ್ಯಾತ ಭಾಷಣಕಾರ ಮೋಹನ್ ಸಿ. ಲಾಜರಸ್ ಅವರು ಭಾಗವಹಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಹಿಂದೂ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ, ಆಯೋಜಕರು ಮುನ್ನೆಚ್ಚರಿಕೆಯಾಗಿ ಹೈಕೋರ್ಟ್‌ನಿಂದ ರಕ್ಷಣೆ ಪಡೆದಿದ್ದರು. ಮಾರ್ಚ್ 20 ರಂದು ಸಂಜೆ ಶ್ರೀಕಾಂತ ಶೆಟ್ಟಿ ನೇತೃತ್ವದ ತಂಡವು ಗೋವಿಂದ ಕಲ್ಯಾಣಮಂಟಪದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಕಾರ್ಯಕ್ರಮದ ಸ್ಥಳಕ್ಕೆ ನುಗ್ಗಲು ಯತ್ನಿಸಿತು. ಮತಾಂತರದ ಆರೋಪ ಹೊರಿಸಿದ ಪ್ರತಿಭಟನಾಕಾರರನ್ನು ತಡೆದ ಪೊಲೀಸರು, ಹೈಕೋರ್ಟ್ ಆದೇಶ ಉಲ್ಲಂಘಿಸದಂತೆ ಸೂಚಿಸಿದರು. ಆದರೂ ಎಚ್ಚರಿಕೆ ಮೀರಿ ವರ್ತಿಸಿದ ಮಹೇಶ್ ಶೆಣೈ, ಶ್ರೀಕಾಂತ ಶೆಟ್ಟಿ, ಸಂತೋಷ್, ಉಮೇಶ್ ನಾಯ್ಕ್ ಸೇರಿದಂತೆ ಒಟ್ಟು 38 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರ ವಿರುದ್ಧ ಅಕ್ರಮ ಕೂಟ ಹಾಗೂ ಶಾಂತಿ ಭಂಗದ ಪ್ರಯತ್ನದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.



































