
ಉಡುಪಿ: ಭ್ರಷ್ಟಾಚಾರದ ಗಂಭೀರ ಆರೋಪದಡಿಯಲ್ಲಿ ತನಿಖೆ ಎದುರಿಸುತ್ತಿರುವ ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ (RTO) ಲಕ್ಷ್ಮೀನಾರಾಯಣ ಅವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಕೆಲವು ತಿಂಗಳ ಹಿಂದೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಇವರನ್ನು ದಾವಣಗೆರೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಉಡುಪಿ ಆರ್ ಟಿ ಓ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲಕ್ಷ್ಮೀನಾರಾಯಣ ಅವರು ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಸಿಲುಕಿದ್ದು, ಲೋಕಾಯುಕ್ತ ಪೊಲೀಸರು ಇತ್ತೀಚೆಗೆ ಇವರ ಮನೆ ಮತ್ತು ಕಚೇರಿಯ ಮೇಲೆ ಭರ್ಜರಿ ದಾಳಿ ನಡೆಸಿದ್ದರು. ಈ ದಾಳಿಯ ನಂತರ ನಡೆದ ಪ್ರಾಥಮಿಕ ತನಿಖೆಯಲ್ಲಿ, ಅಧಿಕಾರಿಯ ಒಟ್ಟು ಆದಾಯಕ್ಕಿಂತ ಶೇ. 211.88 ರಷ್ಟು ಹೆಚ್ಚಿನ ಆಸ್ತಿಯನ್ನು ಅಕ್ರಮವಾಗಿ ಹೊಂದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಭ್ರಷ್ಟಾಚಾರದ ಪ್ರಕರಣದ ತನಿಖೆಯು ಪ್ರಸ್ತುತ ನಿರ್ಣಾಯಕ ಹಂತದಲ್ಲಿದ್ದು, ತನಿಖೆಯಲ್ಲಿ ಯಾವುದೇ ಪ್ರಭಾವ ಅಥವಾ ಹಸ್ತಕ್ಷೇಪ ಉಂಟಾಗಬಾರದು ಎಂಬ ದೃಷ್ಟಿಯಿಂದ ಸರ್ಕಾರ ಇವರನ್ನು ದಾವಣಗೆರೆಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ವರ್ಗಾಯಿಸಿದೆ. ಸದ್ಯ ಉಡುಪಿ ಜಿಲ್ಲೆಯ ಆರ್ ಟಿ ಓ ಜವಾಬ್ದಾರಿಯನ್ನು ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಸಂತೋಷ್ ಶೆಟ್ಟಿ ಅವರಿಗೆ ಹಸ್ತಾಂತರಿಸಲಾಗಿದೆ.



































