
ಉಡುಪಿ : ಉಡುಪಿ ತಾಲ್ಲೂಕಿನ ಪೆರ್ಡೂರಿನ ಶ್ರೀ ಅನಂತಪದ್ಮನಾಭ ದೇವಾಲಯದಲ್ಲಿ ಅಪರೂಪದ ಶಿಲ್ಪ ಶೋಭಿತ ದೀಪವೊಂದನ್ನು ಪತ್ತೆ ಯಾಗಿದ್ದು, ಇದು 15ನೇ ಶತಮಾನದ ಶಾಸನೋಕ್ತ ದೇವಾಲಯ ಪರಂಪರೆ ಮತ್ತು ಕಲಾತ್ಮಕತೆಯ ಸಾಕ್ಷಿಯಾಗಿದೆ ಎಂದು ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಪ್ರೊ. ಮುರುಗೇಶಿ ಟಿ. ತಿಳಿಸಿದ್ದಾರೆ.
ದೀಪದ ವಿಶೇಷತೆಗಳು:
ಈ ದೀಪದಲ್ಲಿ ಶೈವ ಮತ್ತು ವೈಷ್ಣವ ಪರಂಪರೆಯ ಶಿಲ್ಪ ಕಲೆಗಳು ಅಪರೂಪದ ರಚನೆಗಳಲ್ಲಿ ಅಲಂಕರಿಸಲ್ಪಟ್ಟಿವೆ.
ಮೊದಲ ಮುಖದಲ್ಲಿ: ಕಾಲಪುರುಷನ ಮೇಲೆ ನಿಂತ ನಟರಾಜನ ಶಿಲ್ಪ, ತಾಳ ಬಾರಿಸುತ್ತಿರುವ ಭೃಂಗಿ, ನಗಾರಿ ಬಾರಿಸುತ್ತಿರುವ ಗಣಧಾರಿ, ಖಡ್ಗ ರಾವಣ ಹಾಗೂ ಕುಮಾರಸ್ವಾಮಿಯ ಮಯೂರ ವಾಹನ ಶಿಲ್ಪಗಳು ಗೋಚರಿಸುತ್ತವೆ.
ಎರಡನೇ ಮುಖದಲ್ಲಿ: ಸಮಭಂಗಿಯಲ್ಲಿ ನಿಂತ ಅನಂತಪದ್ಮನಾಭ, ಇಂದ್ರ, ಬ್ರಹ್ಮ, ಅಗ್ನಿ, ವರುಣ, ಗರುಡ ಮತ್ತು ಶಿವನ ಶಾಂತ ಪ್ರಾರ್ಥನಾ ಶಿಲ್ಪಗಳು ಕಂಡುಬರುತ್ತವೆ.
ಎರಡೂ ಬದಿಗಳಲ್ಲಿ: ಆಕರ್ಷಕ ಸಿಂಹ ಶಿಲ್ಪಗಳು, ಹಾಗೂ ವಿವಿಧ ದೇವತೆಗಳ ಪ್ರತಿನಿಧಾನವಾಗಿರುವ ಸಂವೇದನಾತ್ಮಕ ಶಿಲ್ಪ ನಿರೂಪಣೆಯಿದೆ.
ಶಾಸನದ ಪ್ರಕಾರ 15ನೇ ಶತಮಾನಕ್ಕೆ ಸೇರಿದೆ:
ದೀಪದ ಶಿಲ್ಪ ಶೈಲಿಯು ಕ್ರಿ.ಶ. 1456ರ ಬಸವಣ್ಣರಸ ಬಂಗನ ಶಾಸನದ ಉಲ್ಲೇಖದೊಂದಿಗೆ ಹೊಂದಿಕೆಯಾಗುತ್ತಿದ್ದು, ದೀಪದ ವಯಸ್ಸು ಸುಮಾರು 15ನೇ ಶತಮಾನಕ್ಕೆ ಸೇರಿರುವುದಾಗಿ ನಿಶ್ಚಯಿಸಲಾಗಿದೆ. ಈ ಶಾಸನದಲ್ಲಿ ದೇವಾಲಯಕ್ಕೆ ನೀಡಿದ ಎರಡು ಕಂಚಿನ ದೀಪಗಳ ಉಲ್ಲೇಖವಿದೆ.
ಕುತೂಹಲ ಕರ ಶಿಲ್ಪ – ಖಡ್ಗ ರಾವಣ:
ಅರೆಬೆತ್ತಲೆಯಾಗಿ ವಿಸ್ಮಯ ಮುದ್ರೆಯಲ್ಲಿ ನಿಂತಿರುವ ಖಡ್ಗ ರಾವಣ, ತನ್ನ ನಾಲ್ಕು ಕೈಗಳಲ್ಲಿ ಖಡ್ಗ, ನೇಗಿಲು, ಪಾನಪಾತ್ರೆ ಹಾಗೂ ರುಂಡವನ್ನೂ ಹಿಡಿದಿದ್ದಾನೆ. ಇದು ಪಾಲಕ ಹಾಗೂ ವಿನಾಶಕ ಶಕ್ತಿಯ ಪ್ರತೀಕವಾಗಿದ್ದು, ದೇವಾಲಯದ ಬಾಗಿಲಿನಲ್ಲಿ ರಕ್ಷಣಾ ದೈವವಾಗಿ ಆರಾಧನೆಗೊಳ್ಳುತ್ತಿರುವುದು ವಿಶೇಷ.
ಸಂಶೋಧನೆಗೆ ಬಲ:
ಈ ದೀಪದ ಪತ್ತೆಗೆ ಆನುವಂಶಿಕ ಮೊಕ್ತೇಸರ ಪ್ರಮೋದ್ ರೈ ಪಳಜೆ, ಆಡಳಿತಾಧಿಕಾರಿ ಗುರುರಾಜ್ ಹಾಗೂ ಆದಿಮ ಕಲಾ ಟ್ರಸ್ಟ್ ಉಡುಪಿ ಸಹಕಾರ ನೀಡಿದ್ದಾರೆ ಎಂದು ಪ್ರೊ. ಮುರುಗೇಶಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.