
ಉಡುಪಿ: ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಉಡುಪಿಯಿಂದ ಕೊಂಕಣ ಮಾರ್ಗದಲ್ಲಿ ವಿಶೇಷ ಕುಂಭಮೇಳಕ್ಕೆ ರೈಲು ಚಲಾಯಿಸುವಂತೆ ಮನವಿ ಸಲ್ಲಿಸಿದ್ದಾರೆ. ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಪ್ರದೇಶದಿಂದ ಪ್ರಯಾಗ್ರಾಜ್ನಲ್ಲಿ ನಡೆಯುವ ಮಹಾ ಕುಂಭಮೇಳಕ್ಕೆ ಹಲವಾರು ಭಕ್ತರು ಭಾಗವಹಿಸಲು ಬಯಸುತ್ತಿದ್ದಾರೆ. 144 ವರ್ಷಗಳಿಗೊಮ್ಮೆ ನಡೆಯುವ ಈ ಪವಿತ್ರ ಯಾತ್ರೆಯಲ್ಲಿ ಭಾಗವಹಿಸಲು ಕರಾವಳಿ ಭಕ್ತರಿಗೆ ಸೌಲಭ್ಯ ಮಾಡಿಕೊಡುವ ಉದ್ದೇಶದಿಂದ ಈ ಮನವಿ ಸಲ್ಲಿಸಲಾಗಿದೆ.
ಕೇಂದ್ರ ರೈಲ್ವೆ ಸಚಿವರು ಈ ಮನವಿಗೆ ಸ್ಪಂದಿಸಿ, ಶೀಘ್ರದಲ್ಲೇ ಉಡುಪಿ-ಪ್ರಯಾಗ್ರಾಜ್ ನಡುವೆ ವಿಶೇಷ ರೈಲು ಚಲಾಯಿಸುವುದಾಗಿ ಭರವಸೆ ನೀಡಿದ್ದಾರೆ. ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು ಸಾಮಾನ್ಯ ಮತ್ತು ಎಸಿ ಕೋಚ್ಗಳನ್ನು ಒಳಗೊಂಡ ರೈಲು ವ್ಯವಸ್ಥೆ ಮಾಡುವಂತೆ ಕೋರಿದ್ದು, ಇದರಿಂದ ಸಾಮಾನ್ಯ ಜನರಿಗೂ ಈ ಸೌಲಭ್ಯ ಸಿಗಲಿ ಎಂಬುದು ಅವರ ಉದ್ದೇಶ.
ಈ ಮನವಿ ಈಡೇರಿದರೆ, ಕರಾವಳಿ ಪ್ರದೇಶದಿಂದ ಹಲವಾರು ಭಕ್ತರು ಕುಂಭಮೇಳಕ್ಕೆ ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ರೈಲ್ವೆ ಇಲಾಖೆಯು ದೇಶದಲ್ಲಿನ ರೈಲು ಬೋಗಿಗಳ ಕೊರತೆಯನ್ನು ನೀಡುತ್ತಿದ್ದರೂ, ಜನಸಾಮಾನ್ಯರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ