
ಬ್ರಹ್ಮಚರ್ಯ- ಹರಿಪ್ರೀತಿ
ಸುವಿದ್ಯಾ-ವಾದಶಾಲಿನಃ |
ಇಷ್ಟದಾನ್ ಕಷ್ಟಹರ್ತ್- ನ್ನಃ
ವಿದ್ಯಾಮಾನ್ಯ ಮುನೀನ್ನುಮಃ ||
ದ್ವೈತಮತದ ಪ್ರಖಾಂಡ ಪಂಡಿತರಲ್ಲಿ ಕಳೆದ ಶತಮಾನದ, ಶಕಪುರುಷರಾಗಿ ಗುರುತಿಸಿಕೊಂಡವರು ಪಲಿಮಾರು ಮಠದ ಹಾಗೂ ಭಂಡಾರಿಕೇರಿ ಮಠದ ಉಭಯ ಮಠಾಧೀಶರಾದ ಶ್ರೀ ವಿದ್ಯಾಮಾನ್ಯ ತೀರ್ಥರು. ಪೇಜಾವರ ಮಠದ ವಿಶ್ವೇಶ ತೀರ್ಥರಿಂದ ಹಿಡಿದು ಸುಮಾರು ಎಂಟು ಯತಿಗಳನ್ನು ಹಾಗೂ ಹಾಗೂ ಬಂನ್ನಂಜೆ ಗೋವಿಂದಾಚಾರ್ಯರಿಂದ ಹಿಡಿದು ಹಲವಾರು ಗೃಹಸ್ಥ ಪಂಡಿತರನ್ನು ತಯಾರು ಮಾಡಿದ ಕೀರ್ತಿ ವಿದ್ಯಾಮಾನ್ಯರಿಗೆ ಸಲ್ಲುತ್ತದೆ. ಇವತ್ತಿನ ಪೇಜಾವರ ಶ್ರೀಗಳಿಂದ ಸ್ಥಾಪಿಸಲ್ಪಟ್ಟಂತಹ ವಿದ್ಯಾಪೀಠ, ಪಲಿಮಾರು ಶ್ರೀಗಳಿಂದ ಸ್ಥಾಪಿಸಲ್ಪಟ್ಟ ಯೋಗ ದೀಪಿಕಾ ತತ್ವ ದೀಪಿಕಾ ಇತ್ಯಾದಿ- ವಿದ್ಯಾ ಸಂಸ್ಥೆಗಳು, ಪುತ್ತಿಗೆ ಸುಗುಣೇಂದ್ರ ತೀರ್ಥರಿಂದ ಸಾಧಿಸಲ್ಪಡುತ್ತಿರುವ ವಿಶ್ವವಿಖ್ಯಾತ ಕಾರ್ಯಕ್ರಮಗಳು, ಭಂಡಾರಕೇರಿ ತೀರ್ಥರಿಂದ ನಡೆಯುತ್ತಿರುವ ಭಾಗವತದ ಸಂದೇಶಗಳು, ತನ್ನ ಅದ್ಭುತ ಮಾತುಗಾರಿಕೆಯಿಂದ ಸಭೆಯನ್ನು ಮಂತ್ರಮುಗ್ಧಗೊಳಿಸುವ ಅದಮಾರು ವಿಶ್ವಪ್ರಿಯ ತೀರ್ಥರ ಸಾಧನೆಗಳು, ಬನ್ನಂಜೆ ಗೋವಿಂದಾಚಾರ್ಯರ ಅದ್ಭುತ ಪಾಂಡಿತ್ಯಗಳು ಹೀಗೆ ಇವೆಲ್ಲಕ್ಕೂ ಮೂಲ ಬೇರಾಗಿ, ಇವತ್ತಿಗೂ ಇವರೆಲ್ಲರ ಇಚ್ಛಾ-ಜ್ಞಾನ- ಕ್ರಿಯಾ ಶಕ್ತಿಗಳಾಗಿ ನಿಂತಿರುವವರು ಶ್ರೀ ವಿದ್ಯಾಮಾನ್ಯ ತೀರ್ಥರು. ಅವರ ಸಾಧನೆಗಳು ಇವತ್ತಿಗೂ ಕೂಡ ಜ್ವಲಂತ ಸಾಕ್ಷಿಗಳಾಗಿ ಭಾರತದ ಉದ್ದಗಲಕ್ಕೂ ಕಂಗೊಳಿಸುತ್ತಿವೆ.
ಕೊನೆಯ ಕಾಲದ ತನಕವೂ ಭಕ್ತಿ, ಜ್ಞಾನ ಹಾಗೂ ಹರಿಸರ್ವೋತ್ತಮತ್ವಕ್ಕೆ ಮಹತ್ವ ಕೊಟ್ಟವರು. ಉಳಿದ ಲೌಕಿಕ ವಿಚಾರಗಳು ಎಲ್ಲವೂ ಇವರಿಗೆ ನಗಣ್ಯವಾಗಿತ್ತು. ಮಧ್ವರ ತತ್ವ ವಾದಕ್ಕೆ ತಾನು ಗಟ್ಟಿಯಾಗಿ ನಿಂತು ಭಾರತದ ಉದ್ದಗಲಕ್ಕು ಈ ಕುರಿತ ವಾದ-ವಿವಾದಕ್ಕೆ ತನ್ನನ್ನು, ತನ್ನ ಜೀವನವನ್ನು ಸಮರ್ಪಿಸಿಕೊಂಡ ಮಹಾನ್ ಚೇತನ. ಅಷ್ಟು ದೃಢವಾದ ಜ್ಞಾನ ಹಾಗೂ ನಿಷ್ಠೆ ಇದ್ದವರಿಗೆ ಮಾತ್ರ ಈ ಧೈರ್ಯ ಹಾಗೂ ಕೆಚ್ಚೆದೆ ಬರಲು ಸಾಧ್ಯ. ತನ್ನ ಮತದ ಅಭಿಪ್ರಾಯವನ್ನು, ತನ್ನ ಸಿದ್ಧಾಂತವನ್ನು, ವಾದದ ಮೂಲಕವಾಗಿ ಮತ್ತೊಬ್ಬರಿಗೆ ತಿಳಿಸಿ, ಆ ಮೂಲಕ ತನ್ನ ಮತದ ಸಮರ್ಥನೆಯನ್ನು ಮಾಡುವುದು ಭಾರತದ ಹಾಗೂ ಸನಾತನ ಧರ್ಮದ ಅಸ್ಮಿತೆಯ ಸಂಕೇತವಾಗಿದೆ. ಅದನ್ನೇ ತನ್ನ ಜೀವನದ ಧ್ಯೇಯ ಹಾಗೂ ಗುರಿಯಾಗಿಸಿಕೊಂಡವರು ಶ್ರೀಪಾದರು. ಅವಶ್ಯಕತೆ ಇಲ್ಲ, ಹಾಗೂ ನಮಗೆ ಅದರ ಅಗತ್ಯವೂ ಇಲ್ಲ ಎನ್ನುವ ದೃಷ್ಟಿಯಲ್ಲಿ ಲೌಕಿಕ ವಿಚಾರದಲ್ಲಿ ಅಷ್ಟೇ ಮುಗ್ದತೆಯನ್ನು ಹೊಂದಿದವರು. ಭಂಡಾರ ಕೇರಿ ಮಠಕ್ಕೆ ಪಟ್ಟವಾಗಿದ್ದ ಇವರು ಅನಂತರ ಪಲಿಮಾರು ಮಠದ ಮಠಾಧೀಶರಾಗಿ ಬಂದದ್ದು, ಇವರ ಯೋಗ್ಯತೆಗೆ ಹಾಗೂ ಇವರ ಭಾಗ್ಯಕ್ಕೆ ಧಕ್ಕಿದ ಕೃಷ್ಣಾನುಗ್ರಹವಲ್ಲದೆ ಮತ್ತೇನು?. ಅಷ್ಟರಮಟ್ಟಿನ ತಪಸ್ಸು ಹಾಗೂ ಸನ್ಯಾಸದಲ್ಲಿನ ನಿಷ್ಠೆ ಇವರಲ್ಲಿದ್ದಕ್ಕೆ ಇವರು ಪಡೆದ ಈ ಭಾಗ್ಯವೇ ಸಾಕ್ಷಿ.

ಅವರ ಮಹತ್ವದ ಘಟ್ಟಗಳು.
ಶ್ರೀ ವಿದ್ಯಾಮಾನ್ಯ ತೀರ್ಥರು ಜುಲೈ 27, 1913 ರಂದು ಕರ್ನಾಟಕದ ದಕ್ಷಿಣ ಕೆನರಾ ಜಿಲ್ಲೆಯ ಎರ್ಮಾಳು ಗ್ರಾಮದಲ್ಲಿ ಶ್ರೀ ಕುಪ್ಪಣ್ಣ ತಂತ್ರಿ ಮತ್ತು ಶ್ರೀಮತಿ ರಾಧಮ್ಮ ದಂಪತಿಗಳಿಗೆ ಜನಿಸಿದರು.
12 ನೇ ವಯಸ್ಸಿನಲ್ಲಿ, ಅವರು ನವೆಂಬರ್ 5, 1925 ರಂದು ಕ್ರೋಧನ ನಾಮ ಸಂವತ್ಸರದ ಸಮಯದಲ್ಲಿ ಅದಮಾರು ಮಠದ ಪರಮಪೂಜ್ಯ ಶ್ರೀ ವಿಬುಧಪ್ರಿಯ ತೀರ್ಥರಿಂದ ಸಂತ ದೀಕ್ಷೆ ಪಡೆದು ಭಂಡಾರ ಕೇರಿ ಮಠದ 34ನೇ ಯತಿಗಳಾಗಿ ನೇಮಕಗೊಂಡರು.
ನಾಲ್ಕು ವರ್ಷಗಳ ಕಾಲ ಶ್ರೀ ವಿಬುದ್ಧಪ್ರಿಯ ತೀರ್ಥರ ಬಳಿ ಪ್ರಾಥಮಿಕ ವೇದಾಂತ ಗ್ರಂಥಗಳನ್ನು ಅಧ್ಯಯನ ಮಾಡಿದರು. ಅನಂತರ, ಪ್ರಖ್ಯಾತ ವಿದ್ವಾಂಸರಾದ ಶ್ರೀ ಇನ್ನ ವಾಸುದೇವಾಚಾರ್ಯರ ಮಾರ್ಗದರ್ಶನದಲ್ಲಿ ಅವರು ದಶಪ್ರಕರಣ, ದಶೋಪನಿಷತ್ ಮತ್ತು ತತ್ವಪ್ರಕಾಶಿಕವನ್ನು ಅಧ್ಯಯನ ಮಾಡಿದರು. ನಂತರ ಅವರು ಉತ್ತರಾದಿ ಮಠದ ಶ್ರೀ ಸತ್ಯಧ್ಯಾನ ತೀರ್ಥರ ಅಡಿಯಲ್ಲಿ ನ್ಯಾಯ ಸುಧಾ, ನ್ಯಾಯಾಮೃತ, ತಾತ್ಪರ್ಯ ಚಂದ್ರಿಕಾ ಮತ್ತು ತರ್ಕ ತಾಂಡವ ಮುಂತಾದ ವೇದಾಂತದ ಸುಧಾರಿತ ಪಠ್ಯಗಳನ್ನು ಅಧ್ಯಯನ ಮಾಡಿದರು. ಶ್ರೀ ನ್ಯಾಯ ಸುಧಾ ಮಂಗಲವನ್ನು ಮಾಡಿದ ನಂತರ, ಶ್ರೀ ಸತ್ಯಧ್ಯಾನ ತೀರ್ಥರು ಶ್ರೀ ವಿದ್ಯಾಮಾನ್ಯ ತೀರ್ಥರನ್ನು ಉದ್ದೇಶಿಸಿ “ನೀವು ನಿಜವಾಗಿಯೂ ಜ್ಞಾನ ಭಂಡಾರ (ಜ್ಞಾನದ ಭಂಡಾರ) ಆಗಿದ್ದೀರಿ” ಎಂದು ತಮ್ಮ ಪಾಂಡಿತ್ಯದಿಂದ ಉದ್ಗರಿಸಿದರು. ಸುಮಾರು 27 ವರ್ಷ ವಯಸ್ಸಿನ ಶ್ರೀ ವಿದ್ಯಾಮಾನ್ಯ ತೀರ್ಥರು ಸುಮಾರು 15 ವರ್ಷಕ್ಕೂ ಮಿಕ್ಕಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿ ಜ್ಞಾನ ಮೂರ್ತಿಯಾಗಿ ಕಂಗೊಳಿಸಿದವರು. ವಿದ್ಯಾ ದೇವತೆಯಿಂದ ಮಾನ್ಯರಾದವರು.
ತನ್ನ 56ನೇ ವಯಸ್ಸಿನಲ್ಲಿ, ಫೆಬ್ರವರಿ 3, 1969 ರಂದು ಶ್ರೀ ಪಲಿಮಾರು ಮಠದ ಪೀಠಾಧಿಪತಿಯಾಗಿ ಅಭಿಷೇಕಿಸಲ್ಪಟ್ಟರು ಮತ್ತು ಹೀಗೆ ಎರಡು ಮಠಗಳ ನೇತೃತ್ವ ವಹಿಸಿ ಉಡುಪಿಯಲ್ಲಿ ಶ್ರೀ ಕೃಷ್ಣನನ್ನು ಪೂಜಿಸಿದ ಏಕೈಕ ಮಠಾಧೀಶರಾದರು. ಇದು ಶ್ರೀ ಕೃಷ್ಣ ಮಧ್ವರ ಇಚ್ಛೆಯಾಗಿತ್ತು.
ಶತಮಾನದ ದರ್ಶಕ ಎಂದು ಕರೆಯಲ್ಪಡುವ ಶ್ರೀಪಾದರು ತನ್ನ 88 ವರ್ಷದಲ್ಲಿ ವೈಶಾಖ ಮಾಸದ ಶುದ್ಧ ಏಕಾದಶಿಯಂದು ಮೇ 14, 2000 ರಂದು ಹರಿಪಾದವನ್ನು ಪಡೆದರು.
ತನ್ನ ಕರ್ಮ ಹಾಗೂ ತಾನು ಕೊಟ್ಟ ವಿದ್ಯೆ ಈ ಲೋಕದಲ್ಲಿ ಸ್ಥಾಯಿಯಾಗಿ ನಿಲ್ಲುತ್ತದೆ ಎನ್ನುವ ಸುಭಾಷಿತದಂತೆ ಶಕಮಾನದ ಶಕಪುರುಷರಾದ ಶ್ರೀ ವಿದ್ಯಾಮಾನ್ಯ ತೀರ್ಥರು ಬಿತ್ತಿ ಹೋದ ಬೀಜಗಳು ಇವತ್ತು ಭಾರತದ ಉದ್ದಗಲಕ್ಕು ವೃಕ್ಷಗಳಾಗಿ ಬೆಳೆದು ನಿಂತಿದೆ. ಇನ್ನು ಅವರು ಹಾಗೂ ಅವರ ಕೀರ್ತಿ ಮರೆಯಲು ಸಾಧ್ಯವೇ ಇಲ್ಲದಂತೆ ಬೇರೂರಿಯಾಗಿದೆ. ಅಂತಹ ಶ್ರೀ ಗುರುಗಳ ಪರಮ ಪಾವನವಾದ ಈ ದಿನ ನಮಗೆಲ್ಲರಿಗೂ ಅವರ ಅನುಗ್ರಹ ಆಶೀರ್ವಾದದೊಂದಿಗೆ ನಮ್ಮ ಜೀವನಕ್ಕೆ ಸ್ಫೂರ್ತಿಯಾಗಲಿ ಹಾಗೂ ಗುರುಗಳ ಕೃಪಾನುಗ್ರಹದೊಂದಿಗೆ ಜೀವನ ಸಾರ್ಥಕವಾಗಲಿ.
ವಿ-ದ್ಯಾ ದೇವತೆಯ ಪ್ರತಿ ಮೂರ್ತಿಯಿವರು, ವಿ-
ದ್ಯಾ-ವಿನಯದ ಸಾಕಾರದ ಮೂರ್ತ ರೂಪರು
ಮಾ-ಯಾವಾದ ಖಂಡನದ ತೇಜೋ ರೂಪ. ಮಾ –
ನ್ಯ-ತೆಗೆ ಸಾಕ್ಷಿ ಶ್ರೀ ಕೃಷ್ಣ ಮುಖ್ಯಪ್ರಾಣರ ಪೂಜೆಯು.
ತೀ-ತೀರ ದಾಟಿಸಿದ ಹಲವಾರು ಯತಿ-ಗೃಹಸ್ಥರ ತೀ-
ರ್ಥ-ರೂಪರು. ನಿಜವಾದ ತೀರ್ಥರೂಪರು. ಇವರು ವಿದ್ಯಾಮಾನ್ಯ ತೀರ್ಥರು. ಸಕಲಂ ಮಾನ್ಯರು..
✍ ಸಂತೋಷ್ ಕುಮಾರ್ ಭಟ್,ಮುದ್ರಾಡಿ