
ಉಡುಪಿ : ಶ್ರೀಕೃಷ್ಣ ಮಠದಲ್ಲಿ ಮುಂದಿನ ಪರ್ಯಾಯ ಮಹೋತ್ಸವಕ್ಕೆ ಸಿದ್ಧತೆಗಳು ಪ್ರಾರಂಭವಾಗಿದ್ದು, ಮೊದಲ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಲಿರುವ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪರ್ಯಾಯದ ಪೂರ್ವಭಾವಿ ಧಾರ್ಮಿಕ ವಿಧಿಯಾದ “ಕಟ್ಟಿಗೆ ಮುಹೂರ್ತವು” ಇಂದು ಉಡುಪಿ ಶ್ರೀಕೃಷ್ಣ ಮಠದ ಪರಿಸರದಲ್ಲಿ ವಿಜೃಂಭಣೆಯಿಂದ ನಡೆಯಿತು.

ಈ ಶುಭ ಸಂದರ್ಭದಲ್ಲಿ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಜೊತೆಗೆ, ಪ್ರಸ್ತುತ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಯತಿ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.

ಶೀರೂರು ಮಠದ ದಿವಾನರಾದ ಡಾ. ಉದಯಕುಮಾರ ಸರಳತ್ತಾಯ ಅವರ ನೇತೃತ್ವದಲ್ಲಿ, ಪುರೋಹಿತ ಗಿರಿರಾಜ ಉಪಾಧ್ಯಾಯರು ಶೀರೂರು ಮಠದ ಶ್ರೀ ವಿಠ್ಠಲ ದೇವರು, ಶ್ರೀ ಚಂದ್ರೇಶ್ವರ ದೇವರು, ಶ್ರೀ ಅನಂತೇಶ್ವರ ದೇವರು, ಮತ್ತು ಶ್ರೀ ಕೃಷ್ಣ ಮುಖ್ಯಪ್ರಾಣ ದೇವರಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಧಾರ್ಮಿಕ ವಿಧಿವಿಧಾನಗಳು ಪ್ರಾರಂಭವಾದವು. ನಂತರ, ಮಠದ ಕಲ್ಸಂಕ ಲಕ್ಷ್ಮೀ ತೋಟದಿಂದ ಕಟ್ಟಿಗೆಯನ್ನು ಎತ್ತಿನಗಾಡಿ, ಕೈಗಾಡಿ ಮತ್ತು ಭಕ್ತರು ಕೈಯಲ್ಲಿ ಹೊತ್ತು ಮೆರವಣಿಗೆಯಲ್ಲಿ ತಂದರು. ಬಳಿಕ, ಮಧ್ವ ಸರೋವರದ ಈಶಾನ್ಯ ಭಾಗದ ನಿಗದಿತ ಸ್ಥಳದಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸಿ, ಪ್ರಾರ್ಥನೆ ಸಲ್ಲಿಸಿ, ಕಟ್ಟಿಗೆ ರಥ ನಿರ್ಮಾಣ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಪರ್ಯಾಯ ಸ್ವಾಗತ ಸಮಿತಿ ಕಚೇರಿಯನ್ನು ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶಪಾಲ್ ಸುವರ್ಣ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ರಘುಪತಿ ಭಟ್, ಉಡುಪಿ ನಗರಸಭಾಧ್ಯಕ್ಷ ಪ್ರಭಾಕರ ಪೂಜಾರಿ, ಮಟ್ಟಾರು ರತ್ನಾಕರ ಹೆಗ್ಡೆ, ಮಠದ ಪಾರುಪತ್ಯಗಾರ ಶ್ರೀಶ ಭಟ್ ಕಡೆಕಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಪರ್ಯಾಯ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ರಾಜರ್ಷಿ ವೀರೇಂದ್ರ ಹೆಗ್ಗಡೆಯವರನ್ನು ನೇಮಿಸಲಾಯಿತು. ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರನ್ನು ಅಧ್ಯಕ್ಷರಾಗಿ, ಕಟೀಲು ದೇವಳದ ಅರ್ಚಕ ಗೋಪಾಲಕೃಷ್ಣ ಅಸ್ರಣ್ಣ, ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯ, ಮಣಿಪಾಲದ ಉದ್ಯಮಿ ರಂಜನ್ ಪೈ ಅವರನ್ನು ಕಾರ್ಯಾಧ್ಯಕ್ಷರಾಗಿ ಹಾಗೂ ಮಟ್ಟಾರು ರತ್ನಾಕರ ಹೆಗ್ಡೆಯವರನ್ನು ಪ್ರಧಾನ ಕಾರ್ಯಾಧ್ಯಕ್ಷರಾಗಿ ನೇಮಿಸಲಾಯಿತು.
