
ಉಡುಪಿ: ಜಿಲ್ಲೆಯಲ್ಲಿ ಖಾಸಗಿ ಹಾಗೂ ಸರಕಾರಿ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಖಾತರಿಪಡಿಸುವ ದೃಷ್ಟಿಯಿಂದ ಬಾಗಿಲುಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ (DC) ಸ್ವರೂಪಾ ಟಿ.ಕೆ. ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ (ಆರ್‌ಟಿಎ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಲಾಭದ ಉದ್ದೇಶಕ್ಕಿಂತಲೂ ಜನರಿಗೆ ಸೇವೆ ನೀಡುವ ಗುರಿಯೊಂದಿಗೆ ಕಾರ್ಯನಿರ್ವಹಿಸಬೇಕು. ಲಾಭದ ಹಾದಿಯಲ್ಲಿ ಪೈಪೋಟಿಗಿಳಿದು ಸ್ಪರ್ಧಾತ್ಮಕ ವಾತಾವರಣ ಸೃಷ್ಟಿಸಬಾರದು ಎಂದು ಡಿಸಿ ನಿರ್ದೇಶಿಸಿದರು.
ಸುರಕ್ಷತಾ ನಿಯಮಗಳ ಉಲ್ಲಂಘನೆ: ಖಾಸಗಿ ಬಸ್‌ಗಳ ವಿರುದ್ಧ ದೂರು
ಖಾಸಗಿ ಬಸ್‌ಗಳು ತಮ್ಮ ಫಿಟ್‌ನೆಸ್ ಅವಧಿ ಮುಗಿದಿದ್ದರೂ ರಸ್ತೆಗಳಲ್ಲಿ ಸಂಚರಿಸುತ್ತಿವೆ ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿಲ್ಲ ಎಂದು ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ, ಇಂತಹ ಬಸ್‌ಗಳ ವಿರುದ್ಧ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಇತ್ತೀಚೆಗೆ ನಿಟ್ಟೆಯಲ್ಲಿ ಸಂಭವಿಸಿದ ದುರದೃಷ್ಟಕರ ಘಟನೆಯಲ್ಲಿ ವಿದ್ಯಾರ್ಥಿಯೊಬ್ಬರು ಬಸ್ಸಿನಿಂದ ಬಿದ್ದು ಮೃತಪಟ್ಟ ಹಿನ್ನೆಲೆಯಲ್ಲಿ, ಪೊಲೀಸ್ ಇಲಾಖೆಯು ಎಲ್ಲ ಬಸ್‌ಗಳ ತಪಾಸಣೆ ನಡೆಸಿದ್ದು, ಓವರ್‌ಲೋಡ್ ಆಗಿದ್ದ ಬಸ್‌ಗಳನ್ನು ತಡೆದು ದಂಡ ವಿಧಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹರಿರಾಮ್ ಶಂಕರ್ ತಿಳಿಸಿದರು. ಕಳೆದ 3 ವರ್ಷಗಳ ಅವಧಿಯಲ್ಲಿ ಒಟ್ಟು 14562 ಸಾರಿಗೆ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಸರಕಾರಿ ಬಸ್‌ಗಳಿಗೆ ತೊಂದರೆ ನೀಡಿದರೆ ಕಠಿಣ ಕ್ರಮ
ಯಾವುದೇ ಖಾಸಗಿ ಬಸ್‌ಗಳು ಲಾಭಗಳಿಕೆಯ ಉದ್ದೇಶದಿಂದ ಸರಕಾರಿ ಬಸ್‌ಗಳ ಓಡಾಟಕ್ಕೆ ಅಡ್ಡಪಡಿಸುವುದು ಅಥವಾ ವಿನಾಕಾರಣ ತೊಂದರೆ ನೀಡುವುದನ್ನು ಸಹಿಸುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಪೊಲೀಸರು ಕಾನೂನು ಪ್ರಕಾರ ಎಲ್ಲ ಬಸ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಒದಗಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟಪಡಿಸಿದರು.
ಮಾರ್ಗ ಸಮೀಕ್ಷೆಗೆ ಡಿಸಿ ಆದೇಶ, ವಿದ್ಯಾರ್ಥಿಗಳ ಸಂಕಷ್ಟಕ್ಕೆ ಸ್ಪಂದನೆ
ಮರವಂತೆಯಿಂದ ಪಡುಕೋಣೆ ಭಾಗಕ್ಕೆ ಬಸ್ ಸೇವೆ ಇಲ್ಲದೆ ದಿನನಿತ್ಯ ಸುಮಾರು 2 ಕಿ.ಮೀ. ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ ಎಂದು ಸಭೆಯಲ್ಲಿ ವಿದ್ಯಾರ್ಥಿನಿಯರು ಗಮನಕ್ಕೆ ತಂದರು. ಈ ಕುರಿತು ಶೀಘ್ರದಲ್ಲಿಯೇ ಆ ಮಾರ್ಗದಲ್ಲಿ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.
ಜಿಲ್ಲೆಯ ಗ್ರಾಮೀಣ ಭಾಗಗಳಿಗೆ ಬಸ್ ಸೇವೆ ಒದಗಿಸುವ ಸಾರ್ವಜನಿಕರ ಆಗ್ರಹದ ಹಿನ್ನೆಲೆಯಲ್ಲಿ, ಅಗತ್ಯವಿರುವ ಮಾರ್ಗಗಳನ್ನು ಗುರುತಿಸಲು ಕೆಎಸ್ಸಾರ್ಟಿಸಿ, ಖಾಸಗಿ ಸಾರಿಗೆ ಮಾಲಿಕರು ಮತ್ತು ಆರ್‌ಟಿಒ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಯಾವುದೇ ಮಾರ್ಗದಲ್ಲಿ ಬಸ್‌ಗಳ ಅವಶ್ಯಕತೆ ಇದ್ದರೆ, ಪರವಾನಗಿ ಇದ್ದರೂ ಬಸ್‌ಗಳು ಓಡಾಡದಿದ್ದರೆ, ಅಥವಾ ಬಸ್‌ಗಳಲ್ಲಿ ನಿಯಮಗಳನ್ನು ಪಾಲಿಸದಿದ್ದರೆ ಆ ಬಗ್ಗೆ ಲಿಖಿತ ದೂರನ್ನು ಪ್ರಾದೇಶಿಕ ಸಾರಿಗೆ ಕಚೇರಿಗೆ ಸಲ್ಲಿಸಬಹುದು ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದರು.




































