
ಉಡುಪಿ, ಮೇ 2: ಮಂಗಳೂರು ಬಜಪೆ ತಾಲೂಕಿನ ಕಿನ್ನಿಪದವಿಯಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯ ನಂತರ, ಅದರ ಪ್ರತೀಕಾರವಾಗಿ ಉಡುಪಿಯ ಆತ್ರಾಡಿ ಪ್ರದೇಶದಲ್ಲಿ ಹತ್ಯೆಗೆ ಯತ್ನ ಪ್ರಕರಣ ನಡೆದಿದೆ. ಈ ಘಟನೆಯಿಂದ ಜಿಲ್ಲೆಯಲ್ಲಿ ಮತ್ತಷ್ಟು ಗಂಭೀರತೆ ಮೂಡಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.
ಮೇ 1ರ ರಾತ್ರಿ 11:15ರ ಸುಮಾರಿಗೆ ಆತ್ರಾಡಿಯ ಪೆಟ್ರೋಲ್ ಪಂಪ್ ಬಳಿ ಆಟೋ ಚಾಲಕನೊಬ್ಬರ ಮೇಲೆ ತಲವಾರಿನಿಂದ ದಾಳಿ ನಡೆದಿದೆ. ದಾಳಿಗೊಳಗಾದ ವ್ಯಕ್ತಿಯನ್ನು ಆತ್ರಾಡಿಯ ಅಬೂಬಕರ್ (50) ಎಂದು ಗುರುತಿಸಲಾಗಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಹಿರಿಯಡ್ಕ ಬೊಮ್ಮರಬೆಟ್ಟು ನಿವಾಸಿ ಸಂದೇಶ್ (31) ಮತ್ತು ಬಾಪೂಜಿ ದರ್ಖಾಸು ನಿವಾಸಿ ಸುಶಾಂತ್ (32) ಎಂದು ಗುರುತಿಸಲಾಗಿದೆ. ಅಬೂಬಕರ್ ಅವರು ಬಾಡಿಗೆ ನಿಮಿತ್ತ ಮದಗ ಕಡೆಗೆ ಆಟೋ ಓಡಿಸುತ್ತಿದ್ದಾಗ, ಇಬ್ಬರು ಬೈಕ್‌ನಲ್ಲಿ ಹಿಂಬಾಲಿಸುತ್ತಾ ರಿಕ್ಷಾವನ್ನು ಅಡ್ಡಗಟ್ಟಿ ದಾಳಿ ನಡೆಸಿದ್ದಾರೆ. ತಲವಾರು ಹಿಡಿದಿದ್ದ ಆರೋಪಿಗಳು “ಆಯನ್ ಕಡ್ಪು ಬುಡೊಚ್ಚಿ” (“ಅವನನ್ನು ಕೊಚ್ಚು, ಬಿಡಬೇಡ” ) ಎಂಬ ಉದ್ಧೇಶಿತ ಶಬ್ದಗಳನ್ನು ಬಳಸಿದ್ದಾರೆ ಎಂಬ ಮಾಹಿತಿ ದೊರಕಿದೆ.
ಶೇಡಿಗುಡ್ಡೆ ಬಳಿ ಆಟೋ ನಿಲ್ಲಿಸಿದ ಬಳಿಕ, ಆರೋಪಿಗಳಿಬ್ಬರಲ್ಲಿ ಒಬ್ಬರು ತಲವಾರಿನಿಂದ ತಲೆಗೆ ಹಲ್ಲೆ ಮಾಡಲು ಯತ್ನಿಸಿದ್ದು, ಮತ್ತೊಬ್ಬನು ಬಾಟಲಿಯಿಂದ ಆಟೋ ರಿಕ್ಷಾದ ಗ್ಲಾಸ್‌ಗೆ ಹೊಡೆದಿದ್ದಾನೆ. ಅಬೂಬಕರ್ ಅವರು ಯಾವುದೇ ಭೀಕರ ಗಾಯವಿಲ್ಲದಂತೆ ಸ್ಥಳದಿಂದ ಓಡಿ ತಪ್ಪಿಸಿಕೊಂಡಿದ್ದಾರೆ.
ಉಡುಪಿ ಎಸ್‌ಪಿ ಅರುಣ್ ಕುಮಾರ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈ ದಾಳಿ ಬಜಪೆ ಹತ್ಯೆಗೆ ಪ್ರತೀಕಾರವಾಗಿದ್ದು ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.