
ಉಡುಪಿ, ಫೆಬ್ರವರಿ.22: ಪರ್ಕಳ ಪೇಟೆಯ ಬಡಗುಬೆಟ್ಟು ತಿರುವಿನಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದ್ದು, ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಶೇಡಿಗುಡ್ಡೆ ನಿವಾಸಿ ರಮೇಶ್ ನಾಯಕ್ (55) ಎಂದು ಗುರುತಿಸಲಾಗಿದೆ.
ಮಣಿಪಾಲದ ಜಿಸಿಸಿನಲ್ಲಿ ಕೆಲಸ ಮಾಡುತ್ತಿದ್ದ ರಮೇಶ್ ನಾಯಕ್, ಕಾರು ಇಳಿದು ಬೀಡ ತೆಗೆದುಕೊಳ್ಳಲು ಪಕ್ಕದ ಅಂಗಡಿಗೆ ಹೋಗುವಾಗ ಅಪಘಾತ ಸಂಭವಿಸಿದೆ.ಅತಿ ವೇಗದಲ್ಲಿದ್ದ ಕಾರು ಡಿಕ್ಕಿಯಾದ ರಭಸಕ್ಕೆ ಅವರು ಸುಮಾರು ದೂರ ಎಳೆದೊಯ್ಯಲ್ಪಟ್ಟು, ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಮಾರ್ಗದಲ್ಲಿ ನಿರಂತರ ಅಪಘಾತಗಳು ನಡೆಯುತ್ತಿದ್ದು, ಸೂಕ್ತ ಭದ್ರತಾ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.