
ಕುಂದಾಪುರ: ಇಲ್ಲಿನ ಕೋಟೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಸ್‌ಎಲ್‌ಆರ್‌ಎಂ (SLRM) ಒಣ ತ್ಯಾಜ್ಯ ಸಂಸ್ಕರಣಾ ಕೇಂದ್ರದಲ್ಲಿ ಭಾನುವಾರ ಮುಂಜಾನೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಘಟಕದಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ಘಟನೆಯ ವಿವರ: ಕೋಟೇಶ್ವರ ಪಂಚಾಯತ್ ವ್ಯಾಪ್ತಿಯ ಹಳೆಯ ಕಟ್ಟಡದ ಮೇಲ್ಭಾಗದಲ್ಲಿ ಕಾರ್ಯಾಚರಿಸುತ್ತಿದ್ದ ಈ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಸುಕಿನ ವೇಳೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಘಟಕದ ಕೆಳಭಾಗದಲ್ಲಿ ವಾಣಿಜ್ಯ ಮಳಿಗೆಗಳಿದ್ದು, ಬೆಂಕಿ ತೀವ್ರವಾಗಿ ವ್ಯಾಪಿಸಿದ್ದರಿಂದ ಇಡೀ ಕಟ್ಟಡಕ್ಕೆ ಅಪಾಯ ಎದುರಾಗಿತ್ತು. ಘಟಕದಲ್ಲಿ ಸಂಗ್ರಹಿಸಿಡಲಾಗಿದ್ದ ಟನ್ ಗಟ್ಟಲೆ ಒಣ ತ್ಯಾಜ್ಯ ಹಾಗೂ ಸಂಸ್ಕರಣೆಗೆ ಬಳಸಲಾಗುತ್ತಿದ್ದ ಬೆಲೆಬಾಳುವ ಯಂತ್ರೋಪಕರಣಗಳು ಸಂಪೂರ್ಣವಾಗಿ ಅಗ್ನಿಗೆ ಆಹುತಿಯಾಗಿವೆ. ಅಷ್ಟೇ ಅಲ್ಲದೆ, ಕಟ್ಟಡದ ಮೇಲ್ಛಾವಣಿಯ ತಗಡುಗಳು ಮತ್ತು ಪಕ್ಕದ ಮಳಿಗೆಗಳ ಕೆಲವು ಸಾಮಗ್ರಿಗಳಿಗೆ ಹಾನಿಯಾಗಿದೆ.
ತಪ್ಪಿದ ಭಾರಿ ಅನಾಹುತ: ಮುಂಜಾನೆ ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆ ಯಾತ್ರೆಗೆ ಸಿದ್ಧರಾಗುತ್ತಿದ್ದ ಸಂದರ್ಭದಲ್ಲಿ ಬೆಂಕಿಯನ್ನು ಗಮನಿಸಿ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ಧಾವಿಸಿದ ಕುಂದಾಪುರ ಮತ್ತು ಬೈಂದೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಸಮಯಪ್ರಜ್ಞೆಯಿಂದಾಗಿ ಬೆಂಕಿ ಕೆಳಮಹಡಿಯ ಅಂಗಡಿ ಮುಂಗಟ್ಟುಗಳಿಗೆ ಹರಡುವುದು ತಪ್ಪಿದ್ದು, ಸಂಭವಿಸಬಹುದಾಗಿದ್ದ ಭಾರಿ ದುರಂತವೊಂದು ತಪ್ಪಿದಂತಾಗಿದೆ.



































