
ಉಡುಪಿ: ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಿ, ಉಡುಪಿಯ ಶ್ರೀಕೃಷ್ಣ ಮಠಕ್ಕೆ ಅಪೂರ್ವವಾದ ‘ಚಿನ್ನದ ಭಗವದ್ಗೀತೆ’ ಅರ್ಪಣೆಯಾಗುತ್ತಿದೆ.
2 ಕೋಟಿ ರೂ. ಮೌಲ್ಯದ ಭಕ್ತಿ ಸಮರ್ಪಣೆ:
ದೆಹಲಿಯ ಮೂಲದ ಶ್ರೀಕೃಷ್ಣ ಭಕ್ತರೋರ್ವರು ಅತೀವ ಭಕ್ತಿಯಿಂದ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಈ ‘ಹೊನ್ನಿನ ಭಗವದ್ಗೀತಾ ಹೊತ್ತಗೆ’ಯನ್ನು ಸಿದ್ಧಪಡಿಸಿದ್ದಾರೆ. ಜೂನ್ 8ರಂದು ಸಂಜೆ 5 ಗಂಟೆಗೆ ಈ ಅದ್ಭುತ ಕಲಾಕೃತಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಚಿನ್ನದ ಹಾಳೆಯಲ್ಲಿ ಗೀತಾ ಶ್ಲೋಕಗಳು:
ಈ ವಿಶೇಷ ಪುಸ್ತಕದಲ್ಲಿ ಭಗವದ್ಗೀತೆಯ 18 ಅಧ್ಯಾಯಗಳ ಎಲ್ಲಾ 700 ಶ್ಲೋಕಗಳನ್ನು ಚಿನ್ನದ ಹಾಳೆಗಳ (ತಗಡು) ಮೇಲೆ ಅತ್ಯಂತ ಕಲಾತ್ಮಕವಾಗಿ ಮುದ್ರಿಸಲಾಗಿದೆ. ಇದು ಪುತ್ತಿಗೆ ಶ್ರೀಗಳ ‘ವಿಶ್ವ ಗೀತಾ ಪರ್ಯಾಯ’ದ ಆಶಯಕ್ಕೆ ಮತ್ತೊಂದು ಮಕುಟಪ್ರಾಯವಾದ ಕೊಡುಗೆಯಾಗಿದೆ ಎಂದು ಪರ್ಯಾಯ ಮಠದ ದಿವಾನ ನಾಗರಾಜ ಆಚಾರ್ಯ ಮತ್ತು ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಮಾಹಿತಿ ನೀಡಿದ್ದಾರೆ.
ಭವ್ಯ ಮೆರವಣಿಗೆ:
ಈ ಹೊನ್ನಿನ ಹೊತ್ತಗೆಯನ್ನು ಚಿನ್ನದ ರಥದಲ್ಲಿ ಇರಿಸಿ, ಉಡುಪಿಯ ರಥಬೀದಿಯಲ್ಲಿ ವೈಭವದ ಮೆರವಣಿಗೆ ನಡೆಸಲಾಗುವುದು. ಬಳಿಕ ಪುತ್ತಿಗೆ ಮಠದ ಹಿರಿಯ ಮತ್ತು ಕಿರಿಯ ಶ್ರೀಪಾದರ ದಿವ್ಯ ಸನ್ನಿಧಿಯಲ್ಲಿ ರಾಜಾಂಗಣದಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಇದನ್ನು ಸಾರ್ವಜನಿಕವಾಗಿ ಲೋಕಾರ್ಪಣೆ ಮಾಡಲಾಗುವುದು.



































