
ಉಡುಪಿ: ಮಣಿಪಾಲ-ಪರ್ಕಳ ನಡುವಿನ ರಾಷ್ಟ್ರೀಯ ಹೆದ್ದಾರಿ 169ಎ ಯಲ್ಲಿ ಸಂಪೂರ್ಣ ಹದಗೆಟ್ಟಿರುವ ಕೆಳಪರ್ಕಳ ರಸ್ತೆಯ ಡಾಮರು ಕಾಮಗಾರಿಯು ಸೆಪ್ಟೆಂಬರ್ 15, ಸೋಮವಾರದಿಂದಲೇ ಆರಂಭವಾಗಲಿದೆ. ಈ ಕುರಿತು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕ ಯಶ್‌ಪಾಲ್ ಸುವರ್ಣ ಅವರು ರಾ.ಹೆದ್ದಾರಿ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.
ಶುಕ್ರವಾರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಂಸದರು, ಕಾಮಗಾರಿಯನ್ನು ಒಂದು ವಾರದೊಳಗೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು. ವಿಶೇಷ ಅನುದಾನದೊಂದಿಗೆ ಕೈಗೊಂಡಿರುವ ಈ ಕಾಮಗಾರಿಯು ವೈಜ್ಞಾನಿಕ ರೀತಿಯಲ್ಲಿ ನಡೆಯಲಿದೆ ಎಂದು ಶಾಸಕ ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ.
ರಸ್ತೆ ಕಾಮಗಾರಿ ನಡೆಯುವ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗುವುದು ಎಂದು ತಿಳಿಸಲಾಗಿದ್ದು, ಈ ಕುರಿತು ಪೊಲೀಸ್ ಇಲಾಖೆ ಪ್ರತ್ಯೇಕ ಅಧಿಸೂಚನೆ ಹೊರಡಿಸಲಿದೆ. ರಸ್ತೆ ದುರಸ್ತಿ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸುವಂತೆ ಜನಪ್ರತಿನಿಧಿಗಳು ಮನವಿ ಮಾಡಿದ್ದಾರೆ.