
ಉಡುಪಿ: ನವೆಂಬರ್ 12 ರಂದು ಉಡುಪಿಯ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ಆಯೋಜಿಸಲಾಗಿದ್ದ ಪಶ್ಚಿಮ ವಲಯ ಮಟ್ಟದ ಗೃಹರಕ್ಷಕ ವೃತ್ತಿಪರ ಕ್ರೀಡಾಕೂಟಕ್ಕೆ ಭವ್ಯ ಚಾಲನೆ ದೊರೆಯಿತು. ಕರಾವಳಿ ಮತ್ತು ಮಲೆನಾಡು ಪ್ರದೇಶಗಳಾದ ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ (ಕಾರವಾರ) ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗೃಹರಕ್ಷಕ ಕ್ರೀಡಾಪಟುಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡರು.
ಉದ್ಘಾಟನಾ ಸಮಾರಂಭದಲ್ಲಿ ಗಣ್ಯರ ಸಂದೇಶ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿ ಡಾ. ವಿಜಯ್ ಕುಮಾರ್ ಅವರು, ಗೃಹರಕ್ಷಕ ದಳದವರು ಪ್ರದರ್ಶಿಸುವ ಶಿಸ್ತು, ತಾಳ್ಮೆ, ದಕ್ಷತೆ ಮತ್ತು ಬದ್ಧತೆಯನ್ನು ಶ್ಲಾಘಿಸಿದರು. “ಗೃಹರಕ್ಷಕರಿಗೆ ಇಂತಹ ಕ್ರೀಡಾಕೂಟಗಳನ್ನು ಏರ್ಪಡಿಸುವುದರಿಂದ ಅವರು ದೈಹಿಕವಾಗಿ ಸದೃಢರಾಗುತ್ತಾರೆ ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ,” ಎಂದು ಅಭಿಪ್ರಾಯಪಟ್ಟರು. ಜೊತೆಗೆ, ತಂಡವಾಗಿ ಕಾರ್ಯನಿರ್ವಹಿಸಲು ಕ್ರೀಡಾ ಚಟುವಟಿಕೆಗಳು ಪ್ರೇರಣೆ ನೀಡುತ್ತವೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಅವರು ತಮ್ಮ ಭಾಷಣದಲ್ಲಿ, ಗೃಹರಕ್ಷಕ ದಳವನ್ನು ಪೊಲೀಸ್ ಪಡೆಯ ಪ್ರಮುಖ ಅಂಗವೆಂದು ಬಣ್ಣಿಸಿದರು. “ಗೃಹರಕ್ಷಕರು ಯಾವುದೇ ತುರ್ತು ಸಂದರ್ಭದಲ್ಲಿ ಹಗಲಿರುಳು ಎನ್ನದೆ ಕರ್ತವ್ಯ ನಿರ್ವಹಿಸುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ,” ಎಂದು ಹೇಳಿದರು. ನಿರಂತರವಾದ ಮತ್ತು ಒತ್ತಡದ ಕೆಲಸದಿಂದ ಮನಸ್ಸಿಗೆ ವಿಶ್ರಾಂತಿ ನೀಡಲು ಕ್ರೀಡಾಕೂಟಗಳು ನೆರವಾಗುತ್ತವೆ ಎಂದು ಅವರು ಒತ್ತಿ ಹೇಳಿದರು. “ಸ್ಪರ್ಧೆಯಲ್ಲಿ ಸೋಲು ಮತ್ತು ಗೆಲುವು ಸಾಮಾನ್ಯ. ಇಂದಿನ ಸೋಲು ಮುಂದಿನ ಯಶಸ್ಸಿಗೆ ಮೆಟ್ಟಿಲಾಗಲಿದೆ. ಎಲ್ಲಾ ಗೃಹರಕ್ಷಕ ಸಿಬ್ಬಂದಿ ಕ್ರೀಡಾ ಮನೋಭಾವವನ್ನು ಅಳವಡಿಸಿಕೊಂಡು ಸಕ್ರಿಯವಾಗಿ ಭಾಗವಹಿಸಬೇಕು ಮತ್ತು ಕ್ರೀಡೆಯನ್ನು ದೈನಂದಿನ ಜೀವನದ ಭಾಗವಾಗಿಸಿಕೊಳ್ಳಬೇಕು,” ಎಂದು ಸಲಹೆ ನೀಡಿದರು.
ಕ್ರೀಡಾ ಚಟುವಟಿಕೆಗಳು ಮತ್ತು ಪ್ರತಿಜ್ಞಾ ವಿಧಿ
ಕ್ರೀಡಾಕೂಟದ ಆರಂಭದಲ್ಲಿ ಉಡುಪಿ, ಚಿಕ್ಕಮಗಳೂರು, ಕಾರವಾರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗೃಹರಕ್ಷಕ ಕ್ರೀಡಾಪಟುಗಳಿಂದ ಆಕರ್ಷಕ ಪಥ ಸಂಚಲನ ಜರುಗಿತು. ಚಿಕ್ಕಮಗಳೂರಿನ ಸಂದೀಪ್ ಅವರು ಕ್ರೀಡಾಂಗಣಕ್ಕೆ ಕ್ರೀಡಾಜ್ಯೋತಿಯನ್ನು ತಂದರು. ಈ ಸಂದರ್ಭದಲ್ಲಿ ಎಲ್ಲರೂ ಕ್ರೀಡಾ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಕಾಪು ದಂಡತೀರ್ಥ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಪ್ರಶಾಂತ್ ಕುಮಾರ್ ಶೆಟ್ಟಿ, ವೈದ್ಯೆ ಡಾ. ಶೃತಿ ಬಲ್ಲಾಳ, ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಮೆ ಡಾ. ರೋಶನ್ ಕುಮಾರ್ ಶೆಟ್ಟಿ, ವಿವಿಧ ಘಟಕಗಳ ಘಟಕಾಧಿಕಾರಿಗಳು, ಹಾಗೂ ಗೃಹರಕ್ಷಕ ದಳದ ಪುರುಷ ಮತ್ತು ಮಹಿಳಾ ಗೃಹರಕ್ಷಕರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸಮಾರಂಭದ ಪ್ರಾರಂಭದಲ್ಲಿ ಗೃಹರಕ್ಷಕ ದಳದ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ ಅವರು ಎಲ್ಲರನ್ನು ಸ್ವಾಗತಿಸಿದರು. ಬ್ರಹ್ಮಾವರ ಘಟಕಾಧಿಕಾರಿ ಸ್ಟೀವನ್ ಪ್ರಕಾಶ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು ಮತ್ತು ಸ್ನೇಹ ಜಿ ವಂದನಾರ್ಪಣೆ ಮಾಡಿದರು.













