
ಉಡುಪಿ : ನಗರದಲ್ಲಿ ಕಳ್ಳರ ಹಾವಳಿ ಮಿತಿಮೀರಿದ್ದು, ನಗರ ಠಾಣೆಯಿಂದ ಕೂಗಳತೆಯಲ್ಲಿರುವ ಕಂದಾಯ ಇಲಾಖೆಯ ವಸತಿ ಸಮುಚ್ಛಯದಲ್ಲಿ ಮತ್ತೊಮ್ಮೆ ಕಳ್ಳತನ ನಡೆದಿದೆ. ಜುಲೈ 19ರ ಶನಿವಾರ ತಡರಾತ್ರಿಯಿಂದ ಜುಲೈ 20ರ ಭಾನುವಾರ ಮುಂಜಾನೆಯ ಅವಧಿಯಲ್ಲಿ ಈ ಘಟನೆ ಸಂಭವಿಸಿದ್ದು, ಕಳ್ಳರ ತಂಡದ ಚಲನವಲನಗಳು ಸಮುಚ್ಛಯದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಮೂಲಗಳ ಪ್ರಕಾರ, 3 ರಿಂದ 4 ಮಂದಿಯ ತಂಡ ಕೃತ್ಯ ಎಸಗಿದೆ ಎನ್ನಲಾಗಿದೆ. ವಸತಿ ಸಮುಚ್ಛಯದ 3 ಮನೆಗಳಿಗೆ ನುಗ್ಗಿದ ಕಳ್ಳರು, ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಸಾಧ್ಯತೆ ಇದೆ. ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಕಳೆದ ವರ್ಷವೂ ಇದೇ ವಸತಿ ಸಮುಚ್ಛಯದಲ್ಲಿ ಕಳ್ಳತನ ನಡೆದಿತ್ತು. ಆಗ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದರು. ಆ ಸಮಯದಲ್ಲಿ ಸಿಸಿಟಿವಿ ಸೌಲಭ್ಯ ಇರಲಿಲ್ಲ. ಬಳಿಕ ನಿವಾಸಿಗಳೇ ಒಟ್ಟಾಗಿ ಸಿಸಿಟಿವಿ ಅಳವಡಿಸಿದ್ದರು. ಆದರೂ, ಕಳೆದ ವರ್ಷದ ಕಳ್ಳತನದ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಈ ಮಧ್ಯೆ, ಮತ್ತೆ ಕಳ್ಳತನ ನಡೆದಿರುವುದು ನಗರದ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳರನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ. ಸಾರ್ವಜನಿಕರು ಹೆಚ್ಚು ಜಾಗರೂಕರಾಗಿರುವಂತೆ ಪೊಲೀಸರು ಮನವಿ ಮಾಡಿದ್ದಾರೆ.