
ಉಡುಪಿ: ಖಚಿತ ಮಾಹಿತಿ ಆಧರಿಸಿ ಉಡುಪಿ ಸೆನ್ ಅಪರಾಧ ಪೊಲೀಸರು ನಡೆಸಿದ ದಿಢೀರ್ ಕಾರ್ಯಾಚರಣೆಯಲ್ಲಿ, ಲಾರಿಯಲ್ಲಿ ಸಾಗಿಸುತ್ತಿದ್ದ ಬೃಹತ್ ಪ್ರಮಾಣದ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಉಡುಪಿಯ ಕಿನ್ನಿಮುಲ್ಕಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಸರಿಸುಮಾರು 72 ಲಕ್ಷ ರೂ. ಮೌಲ್ಯದ ಮಾದಕ ವಸ್ತು ಮತ್ತು ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಡುಪಿ ಪೊಲೀಸ್ ಇಲಾಖೆಯ ಸೆನ್ ಅಪರಾಧ ವಿಭಾಗದ ಸಿಬ್ಬಂದಿಗೆ ಲಾರಿಯಲ್ಲಿ ಗಾಂಜಾ ಸಾಗಾಟದ ಬಗ್ಗೆ ರಹಸ್ಯ ಮಾಹಿತಿ ಲಭಿಸಿತ್ತು. ಅದರಂತೆ, ಮಂಗಳೂರಿನಿಂದ ಉಡುಪಿ ಕಡೆಗೆ ಬರುತ್ತಿದ್ದ ಅನುಮಾನಾಸ್ಪದ ಲಾರಿಯನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಈ ದಂಧೆ ಬಯಲಾಗಿದೆ.
ಬಂಧಿತರನ್ನು ಮೈಸೂರು ಮೂಲದ ಗಣೇಶ್ (38) ಮತ್ತು ಆಂಧ್ರ ಪ್ರದೇಶದ ಗೋಪಾಲ್ ರೆಡ್ಡಿ (43) ಎಂದು ಗುರುತಿಸಲಾಗಿದೆ. ಇವರಿಬ್ಬರಿಂದ 65 ಕೆ.ಜಿ ತೂಕದ ಗಾಂಜಾ, ನಗದು 1520 ರೂ., ಮೊಬೈಲ್ ಫೋನ್‌ಗಳು ಮತ್ತು ಗಾಂಜಾ ಸಾಗಾಟಕ್ಕೆ ಬಳಸಿದ್ದ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲಾ ವಸ್ತುಗಳ ಒಟ್ಟು ಮೌಲ್ಯ 72,21,520 ರೂ. ಎಂದು ಅಂದಾಜಿಸಲಾಗಿದೆ.
ಮಲ್ಪೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಸಾರ್ವಜನಿಕರನ್ನು ಮಾದಕ ವ್ಯಸನದಿಂದ ರಕ್ಷಿಸಲು ಪೊಲೀಸ್ ಇಲಾಖೆ ಇಂತಹ ಕಾರ್ಯಾಚರಣೆಗಳನ್ನು ಮುಂದುವರಿಸಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಕ್ರಮಾಂಕ 101/2025ರ ಅಡಿಯಲ್ಲಿ NDPS ಕಾಯ್ದೆ 1985, ಸೆಕ್ಷನ್ 8(c), 20 (b) (ii), (C) ಅಡಿಯಲ್ಲಿ ದೂರು ದಾಖಲಿಸಲಾಗಿದೆ.