
ಕುಂದಾಪುರ: ಉಡುಪಿ ಜಿಲ್ಲೆಯ ಮೊದಲ ವಿದ್ಯುತ್ ಚಿತಾಗಾರವು ಕುಂದಾಪುರ ತಾಲೂಕಿನ ಕೋಟೇಶ್ವರದ ಹಿಂದೂ ರುದ್ರಭೂಮಿಯಲ್ಲಿ ನಿರ್ಮಾಣಗೊಂಡಿದ್ದು, ಶನಿವಾರ ಅದ್ದೂರಿಯಾಗಿ ಲೋಕಾರ್ಪಣೆಗೊಂಡಿತು. ಸುಮಾರು ₹1 ಕೋಟಿ ವೆಚ್ಚದಲ್ಲಿ ನಿರ್ಮಿತ ಈ ಸೌಲಭ್ಯ, ಮಳೆಗಾಲದಲ್ಲಿ ಅಥವಾ ಕಟ್ಟಿಗೆ ಕೊರತೆಯಿಂದ ಶವದ ದಹನದಲ್ಲಿ ಉಂಟಾಗುವ ಅಡಚಣೆಗಳಿಗೆ ಪರಿಹಾರವಾಗಲಿದೆ.
ಈ ನೂತನ ಸೌಲಭ್ಯವನ್ನು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಉದ್ಘಾಟಿಸಿದರು. ಅವರು ಮಾತನಾಡುತ್ತಾ, “ಇಂತಹ ಸದುದ್ದೇಶದ ಯೋಜನೆಗಳಿಗೆ ಅನುದಾನ ನೀಡಿದಾಗ ಜನಪ್ರತಿನಿಧಿಗಳಾಗಿ ನಮಗೆ ತೃಪ್ತಿ ಹಾಗೂ ಧನ್ಯತೆ ಎನ್ನಿಸುತ್ತದೆ” ಎಂದು ಹೇಳಿದರು.
ಈ ಯೋಜನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಉಡುಪಿ ಜಿಲ್ಲಾ ಪಂಚಾಯತ್, ಕುಂದಾಪುರ ತಾಲೂಕು ಪಂಚಾಯತ್, ಕೋಟೇಶ್ವರ ಗ್ರಾಮ ಪಂಚಾಯತ್, ಶಾಸಕರ ಪ್ರದೇಶಾಭಿವೃದ್ಧಿ ನಿಧಿ, ಧಾರ್ಮಿಕ ದತ್ತಿ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ರೂಪುಗೊಂಡಿದೆ. ಸುಮಾರು ₹96 ಲಕ್ಷ ವೆಚ್ಚದಲ್ಲಿ ಚಿತಾಗಾರ ನಿರ್ಮಾಣಗೊಂಡಿದ್ದು, ನವೀಕೃತ ತಾಂತ್ರಿಕ ವ್ಯವಸ್ಥೆಗಳೊಂದಿಗೆ ಸುಸಜ್ಜಿತವಾಗಿದೆ.
100 ವರ್ಷಗಳ ಇತಿಹಾಸಕ್ಕೆ ಹೊಸ ತಿರುವು
ಕೋಟೇಶ್ವರ ಹಿಂದೂ ರುದ್ರಭೂಮಿಯು ಕಳೆದ ನೂರಾರು ವರ್ಷಗಳಿಂದ ಶವ ಸಂಸ್ಕಾರ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗ ಆಧುನಿಕ ಸೌಲಭ್ಯದಿಂದ ಹೊಸ ರೂಪ ಪಡೆದುಕೊಂಡಿದೆ. ಹಿರಿಯ ರಾಜಕೀಯ ನಾಯಕ ಪ್ರತಾಪಚಂದ್ರ ಶೆಟ್ಟಿ ಅವರ ಮುಂದಾಳತ್ವದಲ್ಲಿ ಈ ಯೋಜನೆ ಯಥಾರ್ಥವಾಗಿದ್ದು, ಸಾರ್ವಜನಿಕರಿಗೆ ಉಪಯುಕ್ತವಾಗಲಿದೆ.
ಬಾಲ್ಯದಿಂದ ಬಂಧವಿರುವ ಸ್ಥಳಕ್ಕೆ ಕೊಡುಗೆ ನೀಡಿದ ಸಂತೋಷ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅವರು, “ಕೋಟೇಶ್ವರ ನನ್ನ ಬಾಲ್ಯದ ನೆನೆಪುಗಳಿಗೆ ನಿಕಟವಾಗಿರುವ ಸ್ಥಳ. ಇಲ್ಲಿ ಆಧುನಿಕ ಚಿತಾಗಾರ ಸ್ಥಾಪನೆಯಾದದ್ದು ಸಂತೋಷದ ಸಂಗತಿ. “ಈ ಚಿತಾಗಾರದ ಉಪಯೋಗ ಜಿಲ್ಲೆಯ ಇತರ ಭಾಗಗಳಾದ ಬೈಂದೂರು, ಬ್ರಹ್ಮಾವರ ಪ್ರದೇಶಗಳಲ್ಲೂ ಹೆಚ್ಚಾಗಬೇಕು. ಜನರಲ್ಲಿ ಅರಿವು ಮೂಡಿಸಿದಾಗ ಮಾತ್ರ ಸದುಪಯೋಗ ಸಾಧ್ಯ” ಎಂದು ಅಭಿಪ್ರಾಯಪಟ್ಟರು.

ಸನ್ಮಾನ, ಸಹಭಾಗಿತ್ವ ಮತ್ತು ಉಪಸ್ಥಿತಿ
ಕಾರ್ಯಕ್ರಮದ ಸಂದರ್ಭದಲ್ಲಿ ಯೋಜನೆಗೆ ಶ್ರಮಿಸಿದ ಗಣೇಶ ಎಂ. ಕಾಮತ್, ರಂಗನಾಥ ಭಟ್, ಸುರೇಂದ್ರ ಮಾರ್ಕೋಡು, ಕೆದೂರು ಸದಾನಂದ ಶೆಟ್ಟಿ, ಅಭಿಯಂತರ ಮಹೇಶ್, ತಾಂತ್ರಿಕ ನಿರ್ವಹಣೆಗಾರ ನಾಗರಾಜ್ ಬೆಂಗಳೂರು, ವಿಠಲದಾಸ ಭಟ್, ರಾಜಶೇಖರ ಶೆಟ್ಟಿ, ಕೆ.ಜಿ.ವೈದ್ಯ, ಗುರುರಾಜ್ ರಾವ್ ಮತ್ತು ರತ್ನಾಕರ ಕಾಮತ್ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಕೋಟೇಶ್ವರ ಗ್ರಾಪಂ ಅಧ್ಯಕ್ಷೆ ರಾಗಿಣಿ ದೇವಾಡಿಗ, ಉಪಾಧ್ಯಕ್ಷೆ ಆಶಾ, ಬೀಜಾಡಿ ಗ್ರಾಪಂ ಅಧ್ಯಕ್ಷ ಪ್ರಕಾಶ ಪೂಜಾರಿ, ಗೋಪಾಡಿ ಗ್ರಾಪಂ ಅಧ್ಯಕ್ಷ ಸುರೇಶ ಶೆಟ್ಟಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಜಯರತ್ನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ದಿನೇಶ ಹೆಗ್ಡೆ ಮೊಳಹಳ್ಳಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ ಕ್ರಾಸ್ಟೊ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಿಡಿಒ ದಿನೇಶ್ ನಾಯ್ಕ್ ಸ್ವಾಗತಿಸಿದರು, ರಾಜಶೇಖರ ಶೆಟ್ಟಿ ಪ್ರಾಸ್ತಾವಿಕ ಭಾಷಣ ಮಾಡಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ನಿರ್ವಹಣೆ ಹಮ್ಮಿಕೊಂಡಿದ್ದರು.