
ಉಡುಪಿ : ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ರಸಾಯನಶಾಸ್ತ್ರ ಉಪನ್ಯಾಸಕರ ವೇದಿಕೆಯ ಒಂದು ದಿನದ ಕಾರ್ಯಗಾರವು ಕುಂದಾಪುರ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಶ್ರೀ ವೆಂಕಟರಮಣ ದೇವ ಎಜುಕೇಶನ್ ಟ್ರಸ್ಟ್ ಕುಂದಾಪುರದ ಕಾರ್ಯದರ್ಶಿಗಳಾದ ಶ್ರೀ ಕೆ ರಾಧಾಕೃಷ್ಣ ಶೆಣೈ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಉಡುಪಿ ಜಿಲ್ಲೆಯ ಪದವಿ ಪೂರ್ವ ಕಾಲೇಜು ರಸಾಯನಶಾಸ್ತ್ರ ಉಪನ್ಯಾಸಕರು ತಮ್ಮ ಸಂಸ್ಥೆಗೆ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.
ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ.ಸಿ ಕೆ ಮಂಜುನಾಥ್. Director- Academics & Training, USAMEC, Bengaluru ಇವರು ಎನ್‌ಸಿಎಫ್ 2023ರ ಕುರಿತು ಉಪನ್ಯಾಸಕರಿಗೆ ಮಾಹಿತಿ ನೀಡಿದರು. ಪ್ರತಿ ವಿದ್ಯಾರ್ಥಿಯ ಬೌದ್ಧಿಕಮಟ್ಟ ಎಷ್ಟಿದೆಯೋ ಅದರಲ್ಲಿ ವಿದ್ಯಾರ್ಥಿಗಳು ಕಲಿಯಲು ಅವಕಾಶ ನೀಡಬೇಕು. ವಿದ್ಯಾರ್ಥಿಗಳನ್ನು ಗೌರವಿಸುವ ಮನೋಭಾವ ಪ್ರತಿ ಶಿಕ್ಷಕರಲ್ಲಿ ಇರಬೇಕು. ಶಿಕ್ಷಕರು ಈಗಿನ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ತಲುಪುವ ಮಟ್ಟದಲ್ಲಿ ತಾವಿದ್ದೇವೆಯೇ ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕಿದೆ ಎಂದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಶ್ರೀ ಸಂತೋಷ್ ಸುವರ್ಣ ರಸಾಯನಶಾಸ್ತ್ರ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ವೇಣೂರು ಇವರು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಟೆಕ್ನೋಲೋಜಿ ಸಹಾಯದಿಂದ ರಸಾಯನಶಾಸ್ತ್ರವನ್ನು ಕಲಿಸುವ ವಿವಿಧ ಆಯಾಮಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ರಸಾಯನಶಾಸ್ತ್ರ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಮಂಜುನಾಥ್ ಭಟ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಗೌರವಾಧ್ಯಕ್ಷರಾದ ಶ್ರೀ ರಮಾಕಾಂತ ರೇವಣಕರ್ , ಕಾರ್ಯದರ್ಶಿ ಶ್ರೀಹರಿಪ್ರಸಾದ್, ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಸಂದೀಪ್ ಗಾಣಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿವೃತ್ತ ಪ್ರಾಂಶುಪಾಲರಾದ ವಸಂತ್ ಆಚಾರ್ ಹಾಗೂ ಉಪನ್ಯಾಸಕ ಹುದ್ದೆಯಿಂದ ಪ್ರಾಂಶುಪಾಲರಾಗಿ ಇತ್ತೀಚಿಗೆ ಬಡ್ತಿ ಹೊಂದಿದ ಶ್ರೀಮತಿ ಸುಶೀಲ , ಶ್ರೀ ಹರಿಪ್ರಸಾದ್ , ಶ್ರೀ ಸೀತಾರಾಮ್ ಇವರನ್ನು ಸನ್ಮಾನಿಸಲಾಯಿತು. ಉಡುಪಿ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಮುಖ್ಯ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ರಾಜ್ಯ ಸಂಘದ ಉಡುಪಿ ಜಿಲ್ಲಾ ಪ್ರತಿನಿಧಿ ಪ್ರಾಂಶುಪಾಲರಾದ ಶ್ರೀ ಕೃಷ್ಣಮೂರ್ತಿ ಸ್ವಾಗತಿಸಿ, ವಿದ್ಯೋದಯ ಪಿ ಯು ಕಾಲೇಜು ಉಪನ್ಯಾಸಕಿ ರಂಜನಾ ವಂದಿಸಿದರು. ಉಪನ್ಯಾಸಕಿ ಸ್ಮಿತಾ ಶೆಟ್ಟಿ ನಿರೂಪಿಸಿದರು.