
ಉಡುಪಿ : ಅಸಂಖ್ಯಾತ ಹಿಂದೂಗಳ ಧಾರ್ಮಿಕ ಶೃದ್ಧಾ ಕೇಂದ್ರ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಟಾರ್ಗೆಟ್ ಮಾಡಿರುವ ಸಮಾಜ ಕಂಟಕ ಮಹೇಶ್ ಶೆಟ್ಟಿ ತಿಮರೋಡಿ , ಹಿಂದೂ ಧಾರ್ಮಿಕ ಕೇಂದ್ರಗಳ ರಕ್ಷಣೆಯ ಪರ ನಿಂತಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸಹಿತ ಬಿಜೆಪಿ ನಾಯಕರುಗಳನ್ನು ವಾಚಾಮಗೋಚರವಾಗಿ ನಿಂದಿಸಿ ಮಾನ ಹಾನಿಕರ , ಅಸಹ್ಯಕರ ಮಾತುಗಳನ್ನಾಡಿರುವುದು ಸಾಮಾಜಿಕ ಜಾಲತಾಣದ ಮೂಲಕ ಜಗಜ್ಜಾಹೀರವಾಗಿದ್ದು , ಗೂoಡಾಗಿರಿ ಪ್ರವೃತ್ತಿಯೊಂದಿಗೆ ಆಧಾರ ರಹಿತ ಸುಳ್ಳು ಆರೋಪಗಳ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಯನ್ನು ತಕ್ಷಣ ಬಂಧಿಸಿ ತನಿಖೆಗೊಳಪಡಿಸಬೇಕು ಎಂದು ಉಡುಪಿ ಜಿಲ್ಲಾ ಬಿಜೆಪಿ ಅಗ್ರಹಿಸಿದೆ. ಧಾರ್ಮಿಕ ಕ್ಷೇತ್ರದ ಬಗ್ಗೆ ಯಾರೇ ಒಳ್ಳೆಯ ಮಾತುಗಳನ್ನಾಡಿದರೂ ಅವರ ಚಾರಿತ್ರ್ಯಹರಣ ಮಾಡುವ ಮೂಲಕ ಬಾಯಿ ಮುಚ್ಚಿಸುವ ಷಡ್ಯಂತ್ರ ರೂಪಿಸುತ್ತಿರುವ ಅಪಾಯಕಾರಿ ರೌಡಿ ಮನಸ್ಥಿತಿಯನ್ನು ಹೊಂದಿರುವ ಮಹೇಶ್ ಶೆಟ್ಟಿ ತಿಮರೋಡಿಯನ್ನು ತಕ್ಷಣ ಬಂಧಿಸಿ ಕಾನೂನಾತ್ಮಕ ಶಿಕ್ಷೆಗೆ ಒಳಪಡಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಸರಕಾರವನ್ನು ಆಗ್ರಹಿಸಿದ್ದಾರೆ.
ಪಕ್ಷದ ನಾಯಕರ ವಿರುದ್ಧ ಮಾನಹಾನಿಕರ ಅವಾಚ್ಯ ಶಬ್ದ ಪ್ರಯೋಗದ ಮೂಲಕ ಸಮಾಜದಲ್ಲಿ ಶಾಂತಿ ಭಂಗಕ್ಕೆ ಪ್ರತ್ನಿಸುತ್ತಿರುವ ತಿಮರೋಡಿಯ ವರ್ತನೆ ಪಕ್ಷದ ಕೋಟ್ಯಾಂತರ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಭಾವನೆಗೆ ಘಾಸಿಯನ್ನುಂಟುಮಾಡಿದೆ.
ತನ್ನ ಕೆಟ್ಟ ಪ್ರವೃತ್ತಿಯನ್ನು ಯಾರೇ ಪ್ರಶ್ನಿಸಿದರೂ , ಧಾರ್ಮಿಕ ಕ್ಷೇತ್ರಗಳ ರಕ್ಷಣೆಗೆ ಯಾರೇ ನಿಂತರೂ ಅವರನ್ನು ಅತ್ಯಂತ ಕೆಟ್ಟ ಪದ ಪ್ರಯೋಗದಿಂದ ಜರೆಯುತ್ತಾ ರಾಜಾರೋಷವಾಗಿ ಸಮಾಜ ಕಂಟಕತನವನ್ನು ಮೆರೆಯುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಯನ್ನು ಪೊಲೀಸ್ ಇಲಾಖೆ ಹದ್ದುಬಸ್ತಿನಲ್ಲಿ ಇಡುವುದು ಇಂದಿನ ಅಗತ್ಯತೆಯಾಗಿದೆ.
ಈ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಸಮಾಜ ಕಂಟಕ ಪ್ರವೃತ್ತಿಯ ಮಹೇಶ್ ಶೆಟ್ಟಿ ತಿಮರೋಡಿಯ ವಿರುದ್ಧ ಉಡುಪಿ ನಗರ ಆರಕ್ಷಕ ಠಾಣೆಯಲ್ಲಿ ದೂರು ದಾಖಲಿಸಿದೆ. ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ , ಸೈಬರ್ ಕಾಯ್ದೆ, ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಾಲಂ ಅನ್ವಯ ಮಹೇಶ್ ಶೆಟ್ಟಿ ತಿಮರೋಡಿಯನ್ನು ತಕ್ಷಣ ಬಂಧಿಸಿ, ಕಾನೂನಾತ್ಮಕ ವಿಚಾರಣೆ ನಡೆಸಿ ಶಿಕ್ಷೆಗೊಳಪಡಿಸಬೇಕು ಎಂದು ಕುತ್ಯಾರು ನವೀನ್ ಶೆಟ್ಟಿ ಅಗ್ರಹಿಸಿದ್ದಾರೆ.