
ಉಡುಪಿ: ಮಲ್ಪೆ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ರೌಡಿ ಶೀಟರ್ ಮತ್ತು ಬಸ್ ಮಾಲೀಕ ಸೈಫ್ ಅಲಿಯಾಸ್ ಸೈಫುದ್ದೀನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಅಂಶ ಬಯಲಾಗಿದೆ. ಈ ಕೊಲೆಯನ್ನು ಹನಿಟ್ರ್ಯಾಪ್ (Honeytrap) ಮಾದರಿಯಲ್ಲಿ ಸಂಚು ರೂಪಿಸಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಕೊಲೆ ಪ್ರಕರಣದಲ್ಲಿ ಈಗಾಗಲೇ ಮೂವರ ಬಂಧನವಾಗಿದ್ದು, ಸಂಚು ರೂಪಿಸಿದ ಆರೋಪದಡಿ ಪ್ರಮುಖ ಆರೋಪಿ ಮಹಮ್ಮದ್ ಫೈಝಲ್‌ನ ಪತ್ನಿ ರಿದಾ ಶಬಾನಾ ಅವರನ್ನೂ ಪೊಲೀಸರು ಬಂಧಿಸಿದ ಬಳಿಕ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿದೆ.
ಕೊಲೆ ಸಂಚಿನ ಹಿನ್ನೆಲೆ
ಈ ಸಂಬಂಧ ಮಾಹಿತಿ ನೀಡಿರುವ ಉಡುಪಿ ಎಸ್‌ಪಿ ಹರಿರಾಂ ಶಂಕರ್, ಕೊಲೆಗೆ ಸಂಚು ರೂಪಿಸಿದ ಆರೋಪದಡಿ ಶಬಾನಾಳನ್ನು ಬಂಧಿಸಲಾಗಿದೆ ಎಂದಿದ್ದಾರೆ.
- ಕೊಲೆ ಆರೋಪಿ ಫೈಝಲ್, ಸೈಫ್ ತನ್ನ ಪತ್ನಿಯ ಮೇಲೆ ಕೆಟ್ಟ ದೃಷ್ಟಿ ಹಾಕಿದ್ದಕ್ಕೆ ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದ.
- ಕೊಲೆಗೀಡಾದ ಸೈಫುದ್ದೀನ್ ಜೊತೆ ಒಂದು ವರ್ಷದಿಂದ ರಿದಾ ಶಬಾನಾಗೆ ಸಲುಗೆ ಇತ್ತು. ಅವಳು ಸೈಫುದ್ದೀನ್ ಜೊತೆ ಚಾಟಿಂಗ್, ಫೋನ್ ಕಾಲ್ ಹಾಗೂ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಳು.
- ಪತ್ನಿ ಸೈಫುದ್ದೀನ್ ಜೊತೆ ನಿಕಟ ಬಾಂಧವ್ಯ ಹೊಂದಿರುವುದು ಆರೋಪಿ ಫೈಝಲ್‌ಗೆ ತಿಳಿದಿತ್ತು. ಇದೇ ಸಂದರ್ಭವನ್ನು ಬಳಸಿಕೊಂಡು, ರಿಧಾಳನ್ನು ಬಲಿಪಶುವನ್ನಾಗಿ ಬಳಸಿ ಫೈಝಲ್ ಕೊಲೆಗೆ ಸಂಚು ರೂಪಿಸಿದ್ದಾನೆ.
- ಕೊಲೆ ನಡೆಯುವ ಮೊದಲು, “ರಿಧಾ ನಿನಗೆ ಕಾಯುತ್ತಿದ್ದಾಳೆ” ಎಂದು ಫೈಝಲ್ ಸುಳ್ಳು ಹೇಳಿ ಸೈಫ್‌ನನ್ನು ಮಣಿಪಾಲದಿಂದ ಕೊಡವೂರಿನ ಮನೆಗೆ ಕರೆಸಿಕೊಂಡಿದ್ದ. ಇದಲ್ಲದೇ, ರಿದಾ ಶಬಾನಾ ಕೂಡಾ “ನಾನು ಕೊಡವೂರಿನಲ್ಲಿ ಕಾಯುತ್ತಿದ್ದೇನೆ” ಎಂದು ಹೇಳಿ ಸೈಫ್‌ನನ್ನು ಕರೆಸಿಕೊಂಡಿದ್ದಳು.
ಪತ್ನಿಯ ಹೆಸರಿನಲ್ಲಿ ಸುಳ್ಳು ಹೇಳಿ ಸೈಫ್‌ನನ್ನು ಕೊಡವೂರಿನ ಮನೆಗೆ ಕರೆದೊಯ್ದ ಫೈಝಲ್, ಅಲ್ಲಿ ಮತ್ತಿಬ್ಬರ ಜೊತೆ ಸೇರಿ ಹತ್ಯೆ ಮಾಡಿದ್ದಾನೆ. “ಇಲ್ಲಿ ಶಬಾನಾ ಕೊಲೆಗೆ ಪ್ರೇರಣೆ ನೀಡಿದ್ದು, ಆಕೆಯನ್ನು ಬಂಧಿಸಿದ್ದೇವೆ” ಎಂದು ಎಸ್‌ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.



































