
ಉಡುಪಿ: ಕುಂದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೋಡಿ ಬೆಂಗ್ರೆಯಲ್ಲಿ ನಡೆದ ಪ್ರವಾಸಿ ಬೋಟ್ ದುರಂತದ ವಿಚಾರವಾಗಿ ಈಗ ರಾಜಕೀಯ ಕೆಸರೆರಚಾಟ ತಾರಕಕ್ಕೇರಿದೆ. ಪ್ರವಾಸಿಗರ ಸಾವಿನಲ್ಲೂ ಕಾಂಗ್ರೆಸ್ ನಾಯಕ ಪ್ರಸಾದ್ ಕಾಂಚನ್ ಅವರು ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಉಡುಪಿ ನಗರ ಅಧ್ಯಕ್ಷ ದಿನೇಶ್ ಅಮೀನ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಕೋಡಿ ಬೆಂಗ್ರೆಯಲ್ಲಿ ಇತ್ತೀಚೆಗೆ ಸಂಭವಿಸಿದ ಬೋಟ್ ಅಪಘಾತದಲ್ಲಿ 3 ಪ್ರವಾಸಿಗರು ಜಲಸಮಾಧಿಯಾಗಿದ್ದರು. ಈ ದುರಂತಕ್ಕೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಬೇಜವಾಬ್ದಾರಿಯೇ ಕಾರಣ ಎಂದು ಶಾಸಕ ಯಶ್‌ಪಾಲ್ ಸುವರ್ಣ ಆಕ್ರೋಶ ಹೊರಹಾಕಿದ್ದರು. ಆದರೆ, ಶಾಸಕರ ಈ ಹೇಳಿಕೆಯನ್ನು ವಿರೋಧಿಸಿ ಪ್ರಸಾದ್ ಕಾಂಚನ್ ಪ್ರತಿಕ್ರಿಯೆ ನೀಡಿದ್ದರು. ಇದನ್ನು ಖಂಡಿಸಿರುವ ದಿನೇಶ್ ಅಮೀನ್, “ಸಾವಿನ ಮನೆಯಲ್ಲೂ ರಾಜಕೀಯ ಲಾಭ ಹುಡುಕುವ ಕಾಂಚನ್ ಅವರ ನಡೆ ಅವಿವೇಕದ ಪರಮಾವಧಿ” ಎಂದು ಟೀಕಿಸಿದ್ದಾರೆ.
ಭೌಗೋಳಿಕ ಜ್ಞಾನದ ಕೊರತೆ: ಕಳೆದ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರಸಾದ್ ಕಾಂಚನ್ ಅವರಿಗೆ ಜಿಲ್ಲೆಯ ಭೌಗೋಳಿಕ ಗಡಿಗಳ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದಿರುವುದು ದುರಂತ. ಕೋಡಿ ಬೆಂಗ್ರೆ ಪ್ರದೇಶವು ಕುಂದಾಪುರ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ ಎಂಬ ಸಾಮಾನ್ಯ ಅರಿವಿಲ್ಲದೆ ಅವರು ಶಾಸಕರ ವಿರುದ್ಧ ಮಾತನಾಡುತ್ತಿದ್ದಾರೆ. ಇಂತಹ ಅಪ್ರಬುದ್ಧ ನಾಯಕರು ಉಡುಪಿಯಲ್ಲಿ ಸ್ಪರ್ಧಿಸುವುದೇ ಮತದಾರರಿಗೆ ಮಾಡುವ ಅಪಮಾನ ಎಂದು ಅಮೀನ್ ಗುಡುಗಿದ್ದಾರೆ.
ಅಧಿಕಾರಿಗಳ ರಕ್ಷಣೆಗೆ ನಿಂತಿದ್ದೇಕೆ?: ಬೋಟ್ ಸುರಕ್ಷತಾ ಕ್ರಮಗಳ ಪಾಲನೆಯಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಅಮಾಯಕರ ಜೀವ ಹೋದರೂ ಅಧಿಕಾರಿಗಳ ಪರ ವಕಾಲತ್ತು ವಹಿಸುತ್ತಿರುವ ಕಾಂಚನ್ ಅವರ ನಡೆ ಅನುಮಾನಾಸ್ಪದವಾಗಿದೆ. ಪ್ರವಾಸೋದ್ಯಮ ಇಲಾಖೆಯ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದ ವಿರುದ್ಧ ತನಿಖೆಗೆ ಆಗ್ರಹಿಸುವ ಬದಲು, ಅಧಿಕಾರಿಗಳನ್ನು ರಕ್ಷಿಸಲು ಮುಂದಾಗಿರುವುದು ಅವರು ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಶಂಕೆಯನ್ನು ಮೂಡಿಸುತ್ತದೆ ಎಂದು ಬಿಜೆಪಿ ಆರೋಪಿಸಿದೆ.
ಜಿಲ್ಲೆಯ ಪ್ರವಾಸೋದ್ಯಮದ ಘನತೆಗೆ ಧಕ್ಕೆ ತಂದಿರುವ ಈ ಘಟನೆಯ ಬಗ್ಗೆ ಕಾಂಗ್ರೆಸ್ ನಾಯಕರು ಅಸಂಬದ್ಧ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಜನರು ಇಂತಹ ರಾಜಕಾರಣಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ದಿನೇಶ್ ಅಮೀನ್ ಎಚ್ಚರಿಸಿದ್ದಾರೆ.



































