
ಉಡುಪಿ : ಡೆಲ್ಟಾ ಬೀಚ್ ಬಳಿ ಸಂಭವಿಸಿದ ಭೀಕರ ಬೋಟ್ ದುರಂತದಲ್ಲಿ ಮೂವರು ಪ್ರವಾಸಿಗರು ಮೃತಪಟ್ಟ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಉಡುಪಿ ಜಿಲ್ಲಾಡಳಿತ, ಪ್ರವಾಸಿಗರ ಸುರಕ್ಷತೆಗಾಗಿ ಅತ್ಯಂತ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಿದೆ. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮತ್ತು ಎಸ್ಪಿ ಹರಿರಾಮ್ ಶಂಕರ್ ಅವರ ನೇತೃತ್ವದಲ್ಲಿ ನಡೆದ ತುರ್ತು ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ನಿಯಮ ಉಲ್ಲಂಘಿಸುವ ಬೋಟ್ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಇನ್ನು ಮುಂದೆ ಜಿಲ್ಲೆಯ ಯಾವುದೇ ಪ್ರವಾಸಿ ಬೋಟ್‌ಗಳು ಬಂದರು ಇಲಾಖೆ, ಕರಾವಳಿ ಕಾವಲು ಪಡೆ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಅನುಮತಿ ಇಲ್ಲದೆ ನೀರಿಗೆ ಇಳಿಯುವಂತಿಲ್ಲ. ಪ್ರಸ್ತುತ ಕಾರ್ಯಾಚರಣೆ ನಡೆಸುತ್ತಿರುವ ಎಲ್ಲಾ ಬೋಟ್‌ಗಳು ಮುಂದಿನ 45 ದಿನಗಳ ಒಳಗೆ ಕಡ್ಡಾಯವಾಗಿ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಗಡುವು ನೀಡಲಾಗಿದೆ. ಪ್ರವಾಸಿಗರ ಪ್ರಾಣ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಲೈಫ್ ಜಾಕೆಟ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ವಿಶೇಷವಾಗಿ, ಪ್ರವಾಸಿಗರು ಲೈಫ್ ಜಾಕೆಟ್ ಧರಿಸದ ಹೊರತು ಬೋಟ್ ಚಲಿಸುವುದಿಲ್ಲ ಎಂಬ ಮುನ್ನೆಚ್ಚರಿಕೆ ಸಂದೇಶದ ಆಡಿಯೋವನ್ನು ಬೋಟ್‌ಗಳಲ್ಲಿ ಅಳವಡಿಸಲು ನಿರ್ದೇಶನ ನೀಡಲಾಗಿದೆ.



































