ಉಡುಪಿ ಜಿಲ್ಲೆಯ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ, ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ, ಹರೇ ಕೃಷ್ಣ ಮಣಿಪಾಲ್ ಸಮುದಾಯದ ಕೃಷ್ಣ ಭಕ್ತರು ಭಗವದ್ಗೀತೆಯ ಮಹತ್ತ್ವವನ್ನು ಹರಡುವ ಅಭಿಯಾನದ ಅಂಗವಾಗಿ, ಶಾಲೆಗಳು, ಕಾಲೇಜುಗಳು, ಮತ್ತು ಗ್ರಂಥಾಲಯಗಳಿಗೆ ಈ ಪವಿತ್ರ ಗ್ರಂಥದ ಉಚಿತ ಪ್ರತಿಗಳನ್ನು ವಿತರಣೆ ಮಾಡುತ್ತಿದ್ದಾರೆ.
ಈ ಅಭಿಯಾನದ ಭಾಗವಾಗಿ ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪೋಷಕರಿಗೆ ಹಾಗೂ ಶಾಲಾ ಗ್ರಂಥಾಲಯಕ್ಕೆ ಉಚಿತವಾಗಿ ಭಗವದ್ಗೀತೆಯ ಪ್ರತಿಗಳನ್ನು ನೀಡುವ ವಿಶೇಷ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರದ ವತಿಯಿಂದ ಆಯೋಜಿಸಲಾಯಿತು.
ಶಾಲಾ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಸಂಸ್ಥಾಪಕ ಶ್ರೀ ಶ್ರೀ ರಮಾನಂದ ಗುರೂಜಿಯವರು ಅಧ್ಯಕ್ಷತೆವಹಿಸಿ ಭಗವದ್ಗೀತೆಯ ಅಧ್ಯಯನದ ಅಗತ್ಯತೆ ಮತ್ತು ಮಹತ್ವದ ಕುರಿತು ಮಾತುಗಳನ್ನು ಹಂಚಿಕೊಂಡರು. ತಮ್ಮ ಅನನ್ಯ ಅನುಭವವನ್ನು ಪ್ರಕಟಿಸಿ, ಭಗವದ್ಗೀತೆಯ ಸ್ತೋಮದ ಅರ್ಥವನ್ನು ಸವಿವರವಾಗಿ ವಿವರಿಸಿದರು.
ಸನ್ಮಾನ ಮತ್ತು ಗೌರವ ಸಮಾರಂಭ
ಹರೇ ಕೃಷ್ಣ ಮಣಿಪಾಲ್ ಸಮುದಾಯದ ಪ್ರಮುಖರು, ಶ್ರೀ ರಾಸ ರಸಿಕ ಪ್ರಭು, ಉತ್ತಮ ನರಸಿಂಹ ಪ್ರಭು, ಉದ್ಧವ ಪ್ರಾಣಕೃಷ್ಣದಾಸ್, ಅಸಿಮಾನಂದ ಕೃಷ್ಣ ನಾಮದಾಸ್, ಅಭಯ ಚಂದ್ರ, ದಿನೇಶ್ ಪ್ರಭು, ಮತ್ತು ಶ್ರೀಮತಿ ಪ್ರಸನ್ನ ಗೋಪಿಕಾ ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಶ್ರೀ ಕ್ಷೇತ್ರದ ಸಂಪ್ರದಾಯದಂತೆ ಗೌರವಿಸಲ್ಪಟ್ಟರು. ಶ್ರೀ ದುರ್ಗಾ ಆದಿಶಕ್ತಿ ದೇವಿಯ ಪ್ರಸಾದ ನೀಡುವ ಮೂಲಕ ಅವರನ್ನು ಸನ್ಮಾನಿಸಿದರು.
ಸ್ವಾಗತ ಮತ್ತು ನಿರೂಪಣೆ
ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಉಷಾ ರಮಾನಂದ ಅವರು ಅತಿಥಿಗಳನ್ನು ಸ್ವಾಗತಿಸಿ, ಭಗವದ್ಗೀತೆಯ ಪ್ರಾಮುಖ್ಯತೆಯ ಕುರಿತು ಮಾತನಾಡಿದರು. ಕಾರ್ಯಕ್ರಮವನ್ನು ನಿರೂಪಿಸಿದ ಹಿರಿಯ ಶಿಕ್ಷಕಿ ಶ್ರೀಮತಿ ಚಂದ್ರಕಲಾ ಶರ್ಮ ಅವರು, ಸಮಾರಂಭದ ಕೊನೆಯಲ್ಲಿ ಧನ್ಯವಾದ ಸಮರ್ಪಣೆ ಸಲ್ಲಿಸಿದರು.
ಉಸ್ತುವಾರಿಯ ಶ್ಲಾಘನೀಯ ಕಾರ್ಯ
ಈ ಸಮಾರಂಭದಲ್ಲಿ ಶ್ರೀಮತಿ ಕುಸುಮ ನಾಗರಾಜ್ ಅವರ ಸಂಘಟನಾ ಶೈಲಿಯು ಎಲ್ಲರ ಮೆಚ್ಚುಗೆಯನ್ನು ಪಡೆದಿತು. ಶಾಲಾ ಗ್ರಂಥಾಲಯದಲ್ಲೂ ಮಕ್ಕಳಿಗೆ ಸುಲಭವಾಗಿ ಓದಲು ಅನುಕೂಲವಾಗುವಂತೆ ಭಗವದ್ಗೀತೆಯ ಪ್ರತಿಗಳನ್ನು ಇರಿಸಲಾಗಿದ್ದು, ಇದರ ಮೂಲಕ ಈ ಗ್ರಂಥದ ಸಂದೇಶವನ್ನು ಮುಂದಿನ ಪೀಳಿಗೆಗೂ ತಲುಪಿಸುವ ಮಹತ್ವಾಕಾಂಕ್ಷೆ ಹೊಂದಲಾಗಿದೆ.