
ಉಡುಪಿ: ಕರಾವಳಿಯ ಪ್ರಮುಖ ಜಿಲ್ಲೆಯಾದ ಉಡುಪಿಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಆತಂಕಕಾರಿ ಮಟ್ಟಕ್ಕೆ ತಲುಪಿದ್ದು, ಕಳೆದ 2 ವರ್ಷಗಳ ಅವಧಿಯಲ್ಲಿ ಒಟ್ಟು 500 ಮಂದಿ ದುರ್ಮರಣಕ್ಕೀಡಾಗಿರುವ ಭೀಕರ ಸತ್ಯ ಬಯಲಾಗಿದೆ. ವಿಧಾನಮಂಡಲ ಅಧಿವೇಶನದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಈ ಅಂಕಿಅಂಶಗಳ ಸಮೇತ ಉತ್ತರ ನೀಡಿದ್ದಾರೆ.
ಅಪಘಾತಗಳ ಭೀಕರ ಅಂಕಿಅಂಶಗಳು
ಜಿಲ್ಲೆಯಲ್ಲಿ ಕಳೆದ 24 ತಿಂಗಳುಗಳಲ್ಲಿ ಒಟ್ಟು 1,840 ರಸ್ತೆ ಅಪಘಾತಗಳು ವರದಿಯಾಗಿವೆ. 2024 ರ ಸಾಲಿನಲ್ಲಿ ನಡೆದ ಅಪಘಾತಗಳಲ್ಲಿ 237 ಜನರು ಜೀವ ಕಳೆದುಕೊಂಡಿದ್ದರೆ, 1,439 ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಇನ್ನು 2025 ನೇ ಸಾಲಿನಲ್ಲಿ ಈ ಸಾವು-ನೋವಿನ ಪ್ರಮಾಣ ಏರಿಕೆಯಾಗಿದ್ದು, 263 ಜನರು ಮೃತಪಟ್ಟಿದ್ದಾರೆ ಮತ್ತು 1,255 ಜನರು ಗಾಯಾಳುಗಳಾಗಿದ್ದಾರೆ. ವಾಹನಗಳ ಅತಿ ವೇಗ ಮತ್ತು ಸಂಚಾರ ನಿಯಮಗಳ ಉಲ್ಲಂಘನೆಯೇ ಈ ದುರಂತಗಳಿಗೆ ಪ್ರಮುಖ ಕಾರಣ ಎನ್ನಲಾಗಿದೆ.
ಹೆಚ್ಚುತ್ತಿರುವ ಸೈಬರ್ ಕ್ರೈಂ ಹಾವಳಿ
ಅಪಘಾತಗಳ ಜೊತೆಗೆ ಜಿಲ್ಲೆಯಲ್ಲಿ ಡಿಜಿಟಲ್ ಅಪರಾಧಗಳೂ ಏರುಗತಿಯಲ್ಲಿವೆ. ಗೃಹ ಸಚಿವರು ನೀಡಿದ ಮಾಹಿತಿಯಂತೆ, 2024 ರಲ್ಲಿ 203 ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿದ್ದವು. 2025 ರಲ್ಲಿ ಈ ಸಂಖ್ಯೆ ತುಸು ಕಡಿಮೆಯಾಗಿ 190 ಕ್ಕೆ ಇಳಿದಿದ್ದರೂ, ಹಣಕಾಸು ವಂಚನೆಯ ಗಂಭೀರತೆ ಕಡಿಮೆಯಾಗಿಲ್ಲ. ಪತ್ತೆ ಹಚ್ಚಲು ಕಷ್ಟಕರವಾಗಿರುವ ಇಂತಹ ಪ್ರಕರಣಗಳನ್ನು ಭೇದಿಸಲು ತಾಂತ್ರಿಕ ತಂಡಗಳ ಮೂಲಕ ವಿಶೇಷ ನಿಯಮಾನುಸಾರ ಕ್ರಮಗಳನ್ನು ಜರುಗಿಸಲಾಗುತ್ತಿದೆ ಎಂದು ಸರ್ಕಾರ ಭರವಸೆ ನೀಡಿದೆ.
ವೇಗ ನಿಯಂತ್ರಣಕ್ಕೆ ಕಠಿಣ ಕ್ರಮ
ಸರಣಿ ಅಪಘಾತಗಳನ್ನು ತಡೆಗಟ್ಟಲು ಜಿಲ್ಲಾ ಮಟ್ಟದ ರಸ್ತೆ ಸುರಕ್ಷಾ ಸಮಿತಿಯು ಮಹತ್ವದ ನಿರ್ಧಾರ ಕೈಗೊಂಡಿದೆ. ಜಿಲ್ಲೆಯಾದ್ಯಂತ ಸಂಚರಿಸುವ ಸರಕು ಸಾಗಣೆ ಲಾರಿಗಳು ಹಾಗೂ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ಬೃಹತ್ ವಾಹನಗಳಿಗೆ ಕಡ್ಡಾಯವಾಗಿ ‘ವೇಗ ನಿಯಂತ್ರಕ’ (Speed Governors) ಅಳವಡಿಸಲು ಈಗಾಗಲೇ ಆದೇಶ ಹೊರಡಿಸಲಾಗಿದೆ. ಹೆದ್ದಾರಿಗಳಲ್ಲಿ ಸಂಚಾರ ಪೊಲೀಸರ ಕಣ್ಗಾವಲು ಹೆಚ್ಚಿಸುವ ಮೂಲಕ ಜೀವಹಾನಿ ತಡೆಗಟ್ಟಲು ಸರ್ಕಾರ ಮುಂದಾಗಿದೆ.



































