
ಮಂಗಳೂರಿನ ಒಂದು ತಂಡವು ಹನಿಟ್ರ್ಯಾಪ್ ಬಲೆಗೆ ಕೆಡವಿ ಹಿಂಸೆ ನೀಡಿದ ಪರಿಣಾಮವಾಗಿ ಅಭಿಷೇಕ್ ಆಚಾರ್ಯ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ, ಡೆತ್ ನೋಟ್ ಆಧಾರದ ಮೇಲೆ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಶ್ವಕರ್ಮ ಯುವ ಮಿಲನ ಸಂಸ್ಥಾಪಕ ಅಧ್ಯಕ್ಷರಾದ ವಿಕ್ರಂ ಐ. ಆಚಾರ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.
ಲೇಡಿಗೋಷನ್ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದ ಅಭಿಷೇಕ್ ಆಚಾರ್ಯ ಅವರನ್ನು ನಿರೀಕ್ಷಾ, ರಾಕೇಶ್, ರಾಹುಲ್ ಮತ್ತು ತಸ್ಲಿಂ ಎಂಬ 4 ಜನರ ತಂಡವು ಈ ಕೃತ್ಯದಲ್ಲಿ ಭಾಗಿಯಾಗಿದೆ. ಈ ನಾಲ್ವರು ಸೇರಿ ಬಲವಂತವಾಗಿ ಅಭಿಷೇಕ್‌ರಿಂದ 3 ರಿಂದ 4 ಲಕ್ಷ ರೂಪಾಯಿಗಳನ್ನು ಕಿತ್ತುಕೊಂಡಿದ್ದರು. ಇದರ ಜೊತೆಗೆ, ಅವರಿಗೆ ಕೊಲೆ ಬೆದರಿಕೆಯನ್ನೂ ಸಹ ಒಡ್ಡಲಾಗಿತ್ತು ಎಂದು ತಿಳಿದು ಬಂದಿದೆ. ಈ ತೀವ್ರ ಹಿಂಸೆಯನ್ನು ತಡೆದುಕೊಳ್ಳಲಾಗದೆ ಅಭಿಷೇಕ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆರೋಪಿಗಳ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದರೂ ಸಹ, ಪೊಲೀಸರು ಯಾವುದೇ ರೀತಿಯ ಕಠಿಣ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ 4 ಮಂದಿಯ ತಂಡವು ಅಭಿಷೇಕ್ ಅವರ ಅಶ್ಲೀಲ ಚಿತ್ರಗಳನ್ನು ಹಿಡನ್ ಕ್ಯಾಮೆರಾದಲ್ಲಿ ಸೆರೆ ಹಿಡಿದು, ಅದನ್ನು ಮುಂದಿಟ್ಟುಕೊಂಡು ಹಣಕ್ಕಾಗಿ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದರು. ಹೀಗಾಗಿ, ಪೊಲೀಸರು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಆರೋಪಿಗಳ ವಿರುದ್ಧ ತಕ್ಷಣವೇ ಕಠಿಣ ಕ್ರಮ ಜರುಗಿಸಬೇಕು ಎಂದು ವಿಕ್ರಂ ಐ. ಆಚಾರ್ಯ ಆಗ್ರಹಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ಎ. ನವೀನ್ ಆಚಾರ್ಯ, ಸುಬ್ರಹ್ಮಣ್ಯ ಆಚಾರ್ಯ ಮತ್ತು ಸಂಕೇಶ್ ಆಚಾರ್ಯ ಅವರು ಸಹ ಉಪಸ್ಥಿತರಿದ್ದರು.



































