
ಚೆನ್ನೈ: ಪ್ರತಿಷ್ಠಿತ ಪಂಚತಾರಾ ಹೋಟೆಲ್‌ಗಳಲ್ಲಿ ಅತಿಥಿಗಳ ಸುರಕ್ಷತೆ ಮತ್ತು ವೈಯಕ್ತಿಕ ಗೌಪ್ಯತೆ ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ. ರಾಜಸ್ಥಾನದ ಪ್ರಸಿದ್ಧ ಉದಯಪುರದಲ್ಲಿರುವ ‘ದಿ ಲೀಲಾ ಪ್ಯಾಲೇಸ್’ ಹೋಟೆಲ್‌ನಲ್ಲಿ ತಂಗಿದ್ದ ಚೆನ್ನೈ ಮೂಲದ ಗರ್ಭಿಣಿ ವಕೀಲೆಯೊಬ್ಬರ ಖಾಸಗಿತನಕ್ಕೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಚೆನ್ನೈ ಗ್ರಾಹಕ ನ್ಯಾಯಾಲಯವು ಹೋಟೆಲ್ ಆಡಳಿತ ಮಂಡಳಿಗೆ ಬರೋಬ್ಬರಿ 10.65 ಲಕ್ಷ ರೂ.ಗಳಿಗೂ ಅಧಿಕ ದಂಡ ವಿಧಿಸಿದೆ.
ಘಟನೆಯ ವಿವರ: 2025ರ ಜನವರಿ ತಿಂಗಳಲ್ಲಿ ಚೆನ್ನೈ ಮೂಲದ ವಕೀಲೆಯೊಬ್ಬರು ತಮ್ಮ ಪತಿಯ ಜನ್ಮದಿನದ ಅಂಗವಾಗಿ ಹಾಗೂ ‘ಬೇಬಿ ಮೂನ್’ ಆಚರಣೆಗಾಗಿ ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ಒಂದು ದಿನಕ್ಕೆ 55,500 ರೂ. ಪಾವತಿಸಿ ಕೊಠಡಿ ಕಾಯ್ದಿರಿಸಿದ್ದರು. ದಂಪತಿ ತಮ್ಮ ಕೊಠಡಿಯ ವಾಶ್‌ರೂಮ್‌ನಲ್ಲಿದ್ದ ಸಮಯದಲ್ಲಿ, ಹೌಸ್‌ಕೀಪಿಂಗ್ ಸಿಬ್ಬಂದಿಯೊಬ್ಬರು ಮಾಸ್ಟರ್ ಕೀ ಬಳಸಿ ಅನಿರೀಕ್ಷಿತವಾಗಿ ಒಳಪ್ರವೇಶಿಸಿದ್ದಾರೆ. ಅತಿಥಿಗಳು ‘ನೋ ಸರ್ವಿಸ್’ ಎಂದು ಕೂಗಿದರೂ ನಿರ್ಲಕ್ಷಿಸಿದ ಸಿಬ್ಬಂದಿ, ಒಡೆದಿದ್ದ ಶೌಚಾಲಯದ ಬಾಗಿಲಿನ ಮೂಲಕ ಇಣುಕಿ ನೋಡಿದ್ದಾರೆ ಎಂದು ದೂರು ದಾಖಲಾಗಿತ್ತು. ಇದು ಗರ್ಭಿಣಿಯಾಗಿದ್ದ ಮಹಿಳೆಗೆ ತೀವ್ರ ಮಾನಸಿಕ ಆಘಾತ ಮತ್ತು ಮುಜುಗರವನ್ನು ಉಂಟುಮಾಡಿತ್ತು.
ನ್ಯಾಯಾಲಯದ ಕಟು ಟೀಕೆ: ಚೆನ್ನೈ ಉತ್ತರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಐಷಾರಾಮಿ ಹೋಟೆಲ್‌ಗಳು ಅತಿಥಿಗಳಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತವೆ, ಆದರೆ ಅಷ್ಟೇ ಮಟ್ಟದ ಭದ್ರತೆ ಮತ್ತು ಗೌಪ್ಯತೆಯನ್ನು ನೀಡಲು ವಿಫಲವಾಗಿವೆ ಎಂದು ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ. “ಹೋಟೆಲ್‌ನ ಆಂತರಿಕ ನಿಯಮಗಳು (SOP) ಸಂವಿಧಾನ ನೀಡಿರುವ ವೈಯಕ್ತಿಕ ಗೌಪ್ಯತೆಯ ಹಕ್ಕಿಗಿಂತ ದೊಡ್ಡದಲ್ಲ” ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಘಟನೆಯ ನಂತರ ಸಿಸಿಟಿವಿ ದೃಶ್ಯಾವಳಿ ನೀಡಲು ವಿಳಂಬ ಮಾಡಿದ್ದು ಮತ್ತು ದಂಪತಿಗೆ ಸರಿಯಾದ ಸ್ಪಂದನೆ ನೀಡದ ಹೋಟೆಲ್ ಕ್ರಮವನ್ನು ಖಂಡಿಸಲಾಗಿದೆ.
ಪರಿಹಾರದ ಮೊತ್ತ: ನ್ಯಾಯಾಲಯವು ಹೋಟೆಲ್ ಬಾಡಿಗೆಯಾದ 55,500 ರೂ.ಗಳನ್ನು 9% ಬಡ್ಡಿಯೊಂದಿಗೆ ಮರಳಿಸುವಂತೆ, ಮಾನಸಿಕ ಹಿಂಸೆಗಾಗಿ 10 ಲಕ್ಷ ರೂ. ಪರಿಹಾರ ಹಾಗೂ 10,000 ರೂ. ನ್ಯಾಯಾಲಯದ ವೆಚ್ಚ ಸೇರಿದಂತೆ ಒಟ್ಟು 10.65 ಲಕ್ಷ ರೂ.ಗಳಿಗೂ ಅಧಿಕ ಮೊತ್ತವನ್ನು ಎರಡು ತಿಂಗಳೊಳಗೆ ಪಾವತಿಸಲು ಆದೇಶಿಸಿದೆ.



































