
ಪುತ್ತೂರು: ಪುತ್ತೂರು ರೈಲ್ವೆ ನಿಲ್ದಾಣದಲ್ಲಿ ನಡೆಯುತ್ತಿದ್ದ ನವೀಕರಣ ಕಾಮಗಾರಿಯ ವೇಳೆ ಶೀಟ್ ಬಿದ್ದು ಇಬ್ಬರು ಮಹಿಳಾ ಪ್ರಯಾಣಿಕರು ಗಾಯಗೊಂಡ ಘಟನೆ ಶನಿವಾರ ವರದಿಯಾಗಿದೆ.
ರೈಲ್ವೆ ನಿಲ್ದಾಣದ ಮೇಲ್ಛಾವಣಿ ದುರಸ್ತಿಗೆ ಶೀಟು ಅಳವಡಿಸುವ ಕಾರ್ಯ ನಡೆಯುತ್ತಿತ್ತು. ಈ ಸಂದರ್ಭ ಎರಡು ಸಿಮೆಂಟ್ ಶೀಟಿನ ನಡುವೆ ಇರಿಸಿದ್ದ ತಗಡು ಶೀಟ್ ಗಾಳಿಗೆ ಹಾರಿ ಹೋಗಿ ನಿಲ್ದಾಣದಲ್ಲಿ ಕುಳಿತು ಮಂಗಳೂರಿಗೆ ತೆರಳಲು ಕಾಯುತ್ತಿದ್ದ ಮಹಿಳಾ ಪ್ರಯಾಣಿಕರ ಮೇಲೆ ಬಿದ್ದಿದೆ.
ಘಟನೆಯಿಂದಾಗಿ ಇಬ್ಬರು ಮಹಿಳೆಯರು ಗಾಯಗೊಂಡಿದ್ದು, ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಓರ್ವರಿಗೆ ಕೈಗೆ ಗಂಭೀರ ಗಾಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ರೈಲ್ವೆ ಇಲಾಖೆಯು ಗಾಯಾಳುಗಳಿಗೆ ಚಿಕಿತ್ಸೆ ನೀಡುವುದಾಗಿ ಹೇಳಿದ್ದು, ಈ ಅವಘಡದಿಂದ ಅಜಾಗರೂಕತೆ , ನಿಲ್ದಾಣದ ಭದ್ರತೆ ಹಾಗೂ ಕಾರ್ಯದ ಶಿಸ್ತಿಗೆ ಸಂಬಂಧಿಸಿದಂತೆ ಪ್ರಶ್ನೆಗಳು ಮೂಡಿವೆ.