
ಹಿರಿಯಡಕ, ಏಪ್ರಿಲ್ 9 : ಉಡುಪಿ ಜಿಲ್ಲೆಯ ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಸಹೋದರಿಯರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಎಪ್ರಿಲ್ 3ರಂದು ಮನೆಯಿಂದ ಹೊರಗೆ ಹೋದ ನಂತರ ಮಂಜುಳಾ (24) ಮತ್ತು ಮಲ್ಲಿಕಾ (18) ಎಂಬವರು ವಾಪಸ್ ಬಾರದಿರುವ ಕುರಿತು ಅವರ ಕುಟುಂಬಸ್ಥರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಂಜುಳಾ ವಿವಾಹಿತರಾಗಿದ್ದು, ಕಳೆದ ಎರಡು ವರ್ಷಗಳಿಂದ ತವರು ಮನೆಯಲ್ಲೇ ವಾಸಿಸುತ್ತಿದ್ದರು. ಮಂಜುಳಾ ಮತ್ತು ಮಲ್ಲಿಕಾ ಇಬ್ಬರೂ ಎಣ್ಣೆಗಪ್ಪು ಮೈಬಣ್ಣ ಹೊಂದಿದ್ದು, ಸಾಧಾರಣ ಶರೀರದವರಾಗಿದ್ದಾರೆ. ಇವರಿಬ್ಬರೂ ಕನ್ನಡ ಮತ್ತು ತುಳು ಭಾಷೆ ಮಾತನಾಡುತ್ತಾರೆ.
ಈ ಸಂಬಂಧ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ. ನಾಪತ್ತೆಯಾದ ಸಹೋದರಿಯರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ಕೂಡಲೇ ಹಿರಿಯಡಕ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.