
ಬೆಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ (ಎಸ್‌ಐಟಿ) ದಿಂದ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳು ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಕರಣವು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಒಳಗಾದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಸಮಗ್ರ ತನಿಖೆಗಾಗಿ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸಿತ್ತು. ಈ ತಂಡದಲ್ಲಿನ ಇಬ್ಬರು ಅಧಿಕಾರಿಗಳು ವೈಯಕ್ತಿಕ ಕಾರಣಗಳನ್ನು ನೀಡಿ ತನಿಖಾ ತಂಡದಿಂದ ದೂರವಿರಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಹಿಂದೆ ಅನೇಕ ಗಂಭೀರ ಪ್ರಕರಣಗಳ ತನಿಖೆಯಲ್ಲಿ ತಮ್ಮ ಕರ್ತವ್ಯ ನಿಷ್ಠೆ ಮತ್ತು ದಕ್ಷತೆಯನ್ನು ಪ್ರದರ್ಶಿಸಿದ್ದ ಐಪಿಎಸ್ ಅಧಿಕಾರಿಗಳನ್ನು ಈ ಎಸ್‌ಐಟಿಗೆ ಆಯ್ಕೆ ಮಾಡಲಾಗಿತ್ತು. ಇದೀಗ ಇಬ್ಬರು ಅಧಿಕಾರಿಗಳು ತಂಡದಿಂದ ಹೊರಬರಲು ಮನಸ್ಸು ಮಾಡಿದ್ದು, ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದರೆ, ಸರ್ಕಾರವು ಅವರನ್ನು ಕರೆಸಿ ಮನವೊಲಿಸುವ ಪ್ರಯತ್ನ ಮಾಡಬಹುದು ಎಂದು ಹೇಳಲಾಗಿದೆ.