
ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ಅವರ ಕೇರಳ ಭೇಟಿಯ ಸಂದರ್ಭದಲ್ಲಿ ನಗರದ ಸೌಂದರ್ಯಕ್ಕೆ ಧಕ್ಕೆ ತಂದ ಹಾಗೂ ಪಾದಚಾರಿಗಳ ಹಾದಿಗೆ ಅಡ್ಡಿಪಡಿಸಿದ ಕಾರಣಕ್ಕೆ ಸ್ವಪಕ್ಷದ ಆಡಳಿತವಿರುವ ಮಹಾನಗರ ಪಾಲಿಕೆಯೇ ಬಿಜೆಪಿಗೆ ಬರೆ ಎಳೆದಿದೆ. ಪಾದಚಾರಿ ಮಾರ್ಗಗಳಲ್ಲಿ ಕಾನೂನುಬಾಹಿರವಾಗಿ ಬ್ಯಾನರ್ ಹಾಗೂ ಫ್ಲೆಕ್ಸ್ ಅಳವಡಿಸಿದ ಆರೋಪದ ಮೇಲೆ ತಿರುವನಂತಪುರಂ ಕಾರ್ಪೊರೇಷನ್ ಬಿಜೆಪಿಗೆ ಬರೋಬ್ಬರಿ 19.7 ಲಕ್ಷ ರೂ. ದಂಡ ವಿಧಿಸಿದೆ.
ಕೇರಳ ಹೈಕೋರ್ಟ್‌ನ ಕಟ್ಟುನಿಟ್ಟಿನ ಆದೇಶಗಳನ್ನು ಗಾಳಿಗೆ ತೂರಿ, ನಗರದ ಪಾಲಯಂ ಜಂಕ್ಷನ್‌ನಿಂದ ಪುಲಿಮೂಡು ಜಂಕ್ಷನ್‌ವರೆಗಿನ ಫುಟ್‌ಪಾತ್‌ಗಳಲ್ಲಿ ದೊಡ್ಡ ಮಟ್ಟದ ಪ್ರಚಾರ ಫಲಕಗಳನ್ನು ಹಾಕಲಾಗಿತ್ತು. ಇದರಿಂದ ಸಾರ್ವಜನಿಕ ಸಂಚಾರಕ್ಕೆ ತೀವ್ರ ತೊಂದರೆಯುಂಟಾದ ಬಗ್ಗೆ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದ ಪಾಲಿಕೆ ಅಧಿಕಾರಿಗಳು, ನಿಯಮ ಉಲ್ಲಂಘನೆಗಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಕರಮಣ ಜಯನ್ ಅವರ ವಿರುದ್ಧ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶುಕ್ರವಾರ ಪ್ರಧಾನಿಯವರ ರೋಡ್ ಶೋ ಮತ್ತು ಸಾರ್ವಜನಿಕ ಸಭೆ ಮುಗಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 223 ಹಾಗೂ 285 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ವಿಶೇಷವೆಂದರೆ, ತಿರುವನಂತಪುರಂ ಪಾಲಿಕೆಯಲ್ಲಿ ಸದ್ಯ ಬಿಜೆಪಿಯೇ ಅಧಿಕಾರದಲ್ಲಿದ್ದು, ಕಾನೂನು ಪಾಲನೆ ವಿಷಯದಲ್ಲಿ ಯಾವುದೇ ಮುಲಾಜಿಲ್ಲದೆ ದಂಡ ವಿಧಿಸಿರುವುದು ಚರ್ಚೆಗೆ ಗ್ರಾಸವಾಗಿದೆ.




































