
ಹೈದರಾಬಾದ್ : ತೆಲುಗು ಮಾಧ್ಯಮಗಳಲ್ಲಿ ಕಳೆದ 18 ವರ್ಷಗಳಿಂದ ಟಿವಿ ನಿರೂಪಕಿಯಾಗಿ ಹಾಗೂ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದ ಶ್ವೇಚ್ಚಾ ವೋತಾರ್ಕರ್ (35) ಅವರು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಹೈದರಾಬಾದ್‌ನಲ್ಲಿ ಬೆಳಕಿಗೆ ಬಂದಿದೆ.
ಪ್ರಸ್ತುತ ಅವರು ಟಿ ನ್ಯೂಸ್ ಚಾನೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಜವಾಹರ್ ನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಸಂಜೆ ಫ್ಯಾನ್‌ಗೆ ಲುಂಗಿಯಿಂದ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶ್ವೇಚ್ಚಾ ಅವರ ಮೃತದೇಹ ಪತ್ತೆಯಾಗಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ದೇಹವನ್ನು ಮರಣೋತ್ತರ ಪರೀಕ್ಷೆಗೆ ಗಾಂಧಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಶ್ವೇಚ್ಚಾ ಅವರು ತಮ್ಮ ತಾಯಿ ಶ್ರೀದೇವಿ ಅವರೊಂದಿಗೆ ರಾಮ್ ನಗರದಲ್ಲಿ ವಾಸಿಸುತ್ತಿದ್ದರು. ಆದರೆ, ಆತ್ಮಹತ್ಯೆಗೆ ಸ್ಪಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕಾಣಿಸಿಕೊಂಡಿರುವ ವಿಶೇಷ ಸಂಗತಿಯೆಂದರೆ, ಆತ್ಮಹತ್ಯೆಗೆ ಕೆಲವೇ ಗಂಟೆಗಳ ಮೊದಲು, ಶ್ವೇಚ್ಚಾ ಇನ್‌ಸ್ಟಾಗ್ರಾಂನಲ್ಲಿ ಬುದ್ಧನ ಉಲ್ಲೇಖವಿರುವ ಫೋಟೋವನ್ನು ಶೇರ್ ಮಾಡಿದ್ದರು. ಅದರಲ್ಲಿ ಅವರು “ಮನಸ್ಸು ಶಾಂತವಾಗಿದ್ದರೆ, ಆತ್ಮ ಮಾತನಾಡುತ್ತದೆ” ಎಂಬ ಕ್ಯಾಪ್ಶನ್ ಬರೆದು, ಕಳೆಗುಂದಿದ ಭಾವನೆ ವ್ಯಕ್ತಪಡಿಸಿದ್ದರು. ಈ ಪೋಸ್ಟ್ ಇದೀಗ ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಮಾಧ್ಯಮ ಲೋಕದಲ್ಲಿ ತಮ್ಮ ನಿಖರ ನಿರೂಪಣಾ ಶೈಲಿಯಿಂದ ಗಮನ ಸೆಳೆದ ಶ್ವೇಚ್ಚಾ ಅವರ ದಾರುಣ ಅಂತ್ಯಕ್ಕೆ ಸಹೋದ್ಯೋಗಿಗಳು, ಅಭಿಮಾನಿಗಳು ಆಘಾತ ವ್ಯಕ್ತಪಡಿಸಿದ್ದಾರೆ.