
ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ತಂದೆ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ ಎಂಟನೇ ತರಗತಿಯ ವಿದ್ಯಾರ್ಥಿಯೊಬ್ಬ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ವರದಿಯಾಗಿದೆ.
ಚೆನ್ನಕಾಟಯ್ಯನ ಗುಡ್ಲು ಗ್ರಾಮದ ನಿವಾಸಿ ಜಗದೀಶ್ (14) ಮೃತಪಟ್ಟ ದುರ್ದೈವಿ ಬಾಲಕ. ಕೆಂಕೆರೆ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈತ, ಇತ್ತೀಚೆಗೆ ಸಂಬಂಧಿಕರ ಮನೆಯಲ್ಲಿ ನಡೆದ ಅಯ್ಯಪ್ಪ ಮಾಲೆ ಕಾರ್ಯಕ್ರಮಕ್ಕೆ ತೆರಳಿ ಹಿಂತಿರುಗಿದ್ದ. ಈ ಕಾರ್ಯಕ್ರಮ ಮುಗಿದ ಬಳಿಕ ಶಾಲೆಗೆ ಹೋಗಲು ಜಗದೀಶ್ ಹಿಂದೇಟು ಹಾಕಿದ್ದ ಎನ್ನಲಾಗಿದೆ. ಮಗ ಶಾಲೆಯನ್ನು ತಪ್ಪಿಸಬಾರದು ಎಂಬ ಕಾಳಜಿಯಿಂದ ತಂದೆ ಬುದ್ಧಿವಾದ ಹೇಳಿ ಶಾಲೆಗೆ ಕಳುಹಿಸಿದ್ದರು.
ಶಾಲೆಯಿಂದ ಗೆಳೆಯನೊಂದಿಗೆ ಹಿಂತಿರುಗುತ್ತಿದ್ದ ವೇಳೆ, “ನೀನು ಹೋಗು, ನಾನು ಬರುತ್ತೇನೆ” ಎಂದು ಸ್ನೇಹಿತನನ್ನು ಕಳುಹಿಸಿ ನಂತರ ಸಮೀಪದ ಬಾವಿಗೆ ಹಾರಿದ್ದಾನೆ. ಮನೆಯವರ ನಿರೀಕ್ಷೆಗಳು ಬಾಲಕನ ಮೇಲೆ ಒತ್ತಡ ಉಂಟುಮಾಡಿದವೇ ಅಥವಾ ಕ್ಷಣಿಕ ಆವೇಶದಲ್ಲಿ ಈ ನಿರ್ಧಾರ ಕೈಗೊಂಡನೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.



































