
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ಮತ್ತೆ ಸುಂಕದ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ಭಾರತ ನಿಲ್ಲಿಸದಿದ್ದರೆ, ಆಮದು ಸುಂಕವನ್ನು (Tariff) ಗಣನೀಯವಾಗಿ ಹೆಚ್ಚಿಸುವುದಾಗಿ ಅವರು ಬೆದರಿಕೆ ಹಾಕಿದ್ದಾರೆ.
ಟ್ರಂಪ್ ಅಸಮಾಧಾನಕ್ಕೆ ಕಾರಣವೇನು?
ರಷ್ಯಾದ ಮೇಲೆ ಅಮೆರಿಕ ಹಲವು ನಿರ್ಬಂಧಗಳನ್ನು ಹೇರಿದ್ದರೂ, ಭಾರತವು ರಷ್ಯಾದೊಂದಿಗೆ ತೈಲ ವ್ಯಾಪಾರ ಮುಂದುವರಿಸುತ್ತಿರುವುದು ಟ್ರಂಪ್ ಅವರ ಕೆಂಗಣ್ಣಿಗೆ ಗುರಿಯಾಗಿದೆ. ರಾಯ್ಟರ್ಸ್ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅವರು, “ರಷ್ಯನ್ ತೈಲ ಖರೀದಿಯ ವಿಚಾರದಲ್ಲಿ ನಾನು ಅತೃಪ್ತನಾಗಿದ್ದೇನೆ. ಭಾರತದ ಮೇಲೆ ಶೀಘ್ರದಲ್ಲೇ ಹೆಚ್ಚಿನ ಟ್ಯಾರಿಫ್ ಹೇರಲು ನಾವು ಸಿದ್ಧರಿದ್ದೇವೆ” ಎಂದು ಎಚ್ಚರಿಸಿದ್ದಾರೆ.
ಮೋದಿಯನ್ನು ಹೊಗಳುತ್ತಲೇ ಬರೆ ಎಳೆದ ಅಧ್ಯಕ್ಷ:
ವಿಶೇಷವೆಂದರೆ, ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತ್ವವನ್ನು ಶ್ಲಾಘಿಸುತ್ತಲೇ ಟ್ರಂಪ್ ಈ ಬೆದರಿಕೆ ಒಡ್ಡಿದ್ದಾರೆ. “ಪಿಎಂ ಮೋದಿ ಬಹಳ ಒಳ್ಳೆಯ ಮನುಷ್ಯ ಮತ್ತು ದಕ್ಷ ನಾಯಕ. ನನ್ನನ್ನು ಸಂತೋಷವಾಗಿಡುವುದು ಎಷ್ಟು ಮುಖ್ಯ ಎಂಬುದು ಅವರಿಗೆ ತಿಳಿದಿದೆ. ಆದರೆ ಅವರು ನನ್ನನ್ನು ಅಸಮಾಧಾನಗೊಳಿಸುವ ವ್ಯಾಪಾರ ಮಾಡುತ್ತಿದ್ದಾರೆ. ಹಾಗಾಗಿ ನಾವು ಅವರ ಮೇಲೆ ಶೇ. 50ಕ್ಕಿಂತಲೂ ಹೆಚ್ಚಿನ ಸುಂಕ ವಿಧಿಸಲು ಹಿಂಜರಿಯುವುದಿಲ್ಲ” ಎಂದು ಟ್ರಂಪ್ ಗುಡುಗಿದ್ದಾರೆ.
ಅಮೆರಿಕ ಈಗಾಗಲೇ ಭಾರತೀಯ ಉತ್ಪನ್ನಗಳ ಮೇಲೆ ಹೆಚ್ಚಿನ ಆಮದು ಸುಂಕ ವಿಧಿಸಿದ್ದು, ಈಗ ತೈಲ ವ್ಯವಹಾರದ ನೆಪದಲ್ಲಿ ಮತ್ತಷ್ಟು ಕಠಿಣ ನಿಲುವು ತಳೆಯುತ್ತಿರುವುದು ಉಭಯ ದೇಶಗಳ ರಾಜತಾಂತ್ರಿಕ ಸಂಬಂಧದಲ್ಲಿ ಸಂಚಲನ ಮೂಡಿಸಿದೆ.













