
ವಾಷಿಂಗ್ಟನ್: ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆಗೆ ಬೆಂಬಲ ನೀಡಲು ನಿರಾಕರಿಸಿದ ನ್ಯಾಟೋ (NATO) ಮಿತ್ರರಾಷ್ಟ್ರಗಳ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹೊರ್ಮುಜ್ ಜಲಸಂಧಿಯ ನಿಯಂತ್ರಣ ಮತ್ತು ಇರಾನ್ ಹಸ್ತಕ್ಷೇಪ ತಡೆಯುವ ಅಮೆರಿಕದ ಯೋಜನೆಗೆ ಸಹಕರಿಸದ ರಾಷ್ಟ್ರಗಳನ್ನು ಟ್ರಂಪ್ ‘ಹೇಡಿಗಳು’ ಎಂದು ಕರೆದಿದ್ದಾರೆ.
ತಮ್ಮ ‘ಟ್ರುತ್ ಸೋಶಿಯಲ್’ ಮಾಧ್ಯಮದಲ್ಲಿ ಈ ಕುರಿತು ಸರಣಿ ಪೋಸ್ಟ್ ಮಾಡಿರುವ ಅವರು, ಅಮೆರಿಕದ ಬೆಂಬಲವಿಲ್ಲದಿದ್ದರೆ ನ್ಯಾಟೋ ಸಂಘಟನೆಗೆ ಯಾವುದೇ ಅಸ್ತಿತ್ವವಿರುವುದಿಲ್ಲ ಮತ್ತು ಜಗತ್ತಿನ ಯಾವುದೇ ಶಕ್ತಿ ಅವರಿಗೆ ಹೆದರುವುದಿಲ್ಲ ಎಂದು ಗುಡುಗಿದ್ದಾರೆ. ತೈಲ ಬೆಲೆ ಏರಿಕೆಯ ಬಗ್ಗೆ ಸದಾ ದೂರು ನೀಡುವ ಮಿತ್ರರಾಷ್ಟ್ರಗಳು, ತೈಲ ರಫ್ತಿನ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿಯನ್ನು ರಕ್ಷಿಸಲು ಅಮೆರಿಕದೊಂದಿಗೆ ಕೈಜೋಡಿಸುತ್ತಿಲ್ಲ ಎಂದು ಅವರು ಕಿಡಿಕಾರಿದ್ದಾರೆ. ನ್ಯಾಟೋ ರಾಷ್ಟ್ರಗಳ ಈ ನಿಲುವನ್ನು ತಾವು ಎಂದಿಗೂ ಮರೆಯುವುದಿಲ್ಲ ಎಂದು ಎಚ್ಚರಿಸಿರುವ ಟ್ರಂಪ್, ಇರಾನ್ ಪರಮಾಣು ಶಸ್ತ್ರಾಸ್ತ್ರ ಪಡೆಯುವುದನ್ನು ತಡೆಯುವುದು ಕೇವಲ ಅಮೆರಿಕದ ಜವಾಬ್ದಾರಿಯಲ್ಲ, ಅದು ಮಿತ್ರರಾಷ್ಟ್ರಗಳ ಹಿತಾಸಕ್ತಿಯೂ ಆಗಿದೆ ಎಂದು ಪ್ರತಿಪಾದಿಸಿದ್ದಾರೆ.



































