
ವಾಷಿಂಗ್ಟನ್: ರಷ್ಯಾದಿಂದ ಅಗ್ಗದ ದರದಲ್ಲಿ ತೈಲ ಖರೀದಿಸುತ್ತಿರುವ ಭಾರತ ಸೇರಿದಂತೆ ಪ್ರಮುಖ ರಾಷ್ಟ್ರಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಆರ್ಥಿಕ ಎಚ್ಚರಿಕೆ ನೀಡಿದ್ದಾರೆ. ಪುಟಿನ್ ಅವರ ಯುದ್ಧ ದಾಹಕ್ಕೆ ಹಣಕಾಸಿನ ನೆರವು ನೀಡುತ್ತಿರುವ ದೇಶಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಉದ್ದೇಶದಿಂದ, ಆಮದು ಸುಂಕವನ್ನು ಬರೊಬ್ಬರಿ 500% ರಷ್ಟು ಹೆಚ್ಚಿಸುವ ವಿವಾದಾತ್ಮಕ ಮಸೂದೆಗೆ ಟ್ರಂಪ್ ಈಗ ಹಸಿರು ನಿಶಾನೆ ತೋರಿದ್ದಾರೆ.
ಉಕ್ರೇನ್ ಹಾಗೂ ರಷ್ಯಾ ನಡುವಿನ ಸಂಘರ್ಷ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ರಷ್ಯಾದ ತೈಲ ಮತ್ತು ಯುರೇನಿಯಂ ಅನ್ನು ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ತೀವ್ರ ನಿಗಾ ಇರಿಸಿರುವ ಅಮೆರಿಕ, ಅಂತಹ ರಾಷ್ಟ್ರಗಳನ್ನು ಆರ್ಥಿಕವಾಗಿ ಹತ್ತಿಕ್ಕಲು ಈ ಹೊಸ ಶಾಸನವನ್ನು ಸಿದ್ಧಪಡಿಸಿದೆ. ಸೆನೆಟರ್ ಲಿಂಡ್ಸೆ ಗ್ರಹಾಂ ನೇತೃತ್ವದಲ್ಲಿ ಮಂಡನೆಯಾಗಿರುವ ಈ ದ್ವಿಪಕ್ಷೀಯ ನಿರ್ಬಂಧ ಮಸೂದೆಯು, ಭಾರತ, ಚೀನಾ ಮತ್ತು ಬ್ರೆಜಿಲ್‌ನಂತಹ ದೇಶಗಳಿಗೆ ಅಮೆರಿಕಕ್ಕೆ ರಫ್ತು ಮಾಡುವ ಸರಕುಗಳ ಮೇಲೆ ಭಾರೀ ತೆರಿಗೆ ವಿಧಿಸುವ ಅಧಿಕಾರವನ್ನು ಅಧ್ಯಕ್ಷರಿಗೆ ನೀಡಲಿದೆ.
ಈಗಾಗಲೇ ಭಾರತದ ಹಲವು ರಫ್ತು ಉತ್ಪನ್ನಗಳ ಮೇಲೆ 50% ರಷ್ಟು ಸುಂಕ ಹೇರಲಾಗಿದ್ದು, ಇದರಲ್ಲಿ ಶೇ. 25 ರಷ್ಟು ಭಾಗ ಕೇವಲ ರಷ್ಯಾ ತೈಲ ಖರೀದಿಯ ಕಾರಣಕ್ಕಾಗಿಯೇ ವಿಧಿಸಲಾಗಿದೆ. ಈಗ ಜಾರಿಗೆ ಬರಲಿರುವ ಹೊಸ ಮಸೂದೆಯು ಮುಂದಿನ ವಾರವೇ ಅಮೆರಿಕದ ಸಂಸತ್ತಿನಲ್ಲಿ ಮತಕ್ಕೆ ಬರುವ ಸಾಧ್ಯತೆಯಿದೆ. ಒಂದು ವೇಳೆ ಇದು ಅಂಗೀಕಾರಗೊಂಡರೆ, ರಷ್ಯಾದ ಇಂಧನ ಮೂಲಗಳನ್ನು ಅವಲಂಬಿಸಿರುವ ರಾಷ್ಟ್ರಗಳು ಅಮೆರಿಕದ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಆರ್ಥಿಕ ಹೊಡೆತ ಅನುಭವಿಸಲಿವೆ. ಭಾರತವು ಇತ್ತೀಚಿನ ದಿನಗಳಲ್ಲಿ ರಷ್ಯಾದಿಂದ ಆಮದು ಮಾಡಿಕೊಳ್ಳುವ ತೈಲ ಪ್ರಮಾಣವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಿದ್ದರೂ, ಸಂಪೂರ್ಣವಾಗಿ ನಿಲ್ಲಿಸದ ಹಿನ್ನೆಲೆಯಲ್ಲಿ ಈ ‘ಸುಂಕದ ಅಸ್ತ್ರ’ ಬಳಕೆ ಮಾಡುವ ಬೆದರಿಕೆಯನ್ನು ಟ್ರಂಪ್ ಒಡ್ಡಿದ್ದಾರೆ.




































