
ವಾಷಿಂಗ್ಟನ್: ಜಗತ್ತಿನ ಯಾವುದೇ ಭಾಗದಿಂದ ಅಮೆರಿಕದ ಮೇಲೆ ನಡೆಯಬಹುದಾದ ಕ್ಷಿಪಣಿ ದಾಳಿಗಳನ್ನು ತಡೆಯಲು ಬಾಹ್ಯಾಕಾಶ ಆಧಾರಿತ ರಕ್ಷಣಾ ವ್ಯವಸ್ಥೆಯಾದ ‘ಗೋಲ್ಡನ್ ಡೋಮ್’ ಅನ್ನು ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಯೋಜನೆ ಜಗತ್ತಿನಲ್ಲಿ ಮೊದಲ ಬಾರಿಗೆ ಕೈಗೊಳ್ಳಲಾಗುತ್ತಿದೆ.
ಸುಮಾರು ₹14.97 ಲಕ್ಷ ಕೋಟಿ ವೆಚ್ಚದಲ್ಲಿ ಈ ಯೋಜನೆ 2029ರ ವೇಳೆಗೆ ಪೂರ್ಣಗೊಳ್ಳಲಿದೆ. ಮೊದಲ ಹಂತಕ್ಕೆ ₹2.13 ಲಕ್ಷ ಕೋಟಿ ಮೀಸಲಿಡಲಾಗಿದೆ. ಆದರೆ, ಅಮೇರಿಕಾದ ಕೆಲ ಅಧಿಕಾರಿಗಳ ಪ್ರಕಾರ ಇದು ₹13.77 ಲಕ್ಷ ಕೋಟಿಯಿಂದ ₹46.35 ಲಕ್ಷ ಕೋಟಿವರೆಗೆ ವೆಚ್ಚವಾಗಬಹುದು.
ಈ ಯೋಜನೆಯ ನೇತೃತ್ವವನ್ನು ಅಮೆರಿಕದ ಸ್ಪೇಸ್ ಫೋರ್ಸ್ ಮುಖ್ಯಸ್ಥ ಜನರಲ್ ಮಿಚೆಲ್ ಗೆಟಿಯನ್ ವಹಿಸಿಕೊಳ್ಳಲಿದ್ದಾರೆ.
ಉಪಗ್ರಹಗಳ ಮೂಲಕ ತಕ್ಷಣದ ಪ್ರತಿಕ್ರಿಯೆ
ಗೋಲ್ಡನ್ ಡೋಮ್ ವ್ಯವಸ್ಥೆಯಲ್ಲಿ ಬಹುಸಂಖ್ಯೆಯ ಉಪಗ್ರಹಗಳನ್ನು ಉಡಾವಣೆ ಮಾಡಿ, ಕ್ಷಿಪಣಿ ದಾಳಿಗಳನ್ನು ಮುಂಚಿತವಾಗಿ ಪತ್ತೆಹಚ್ಚಿ ನಾಶಪಡಿಸಲಾಗುತ್ತದೆ. ಖಂಡಾಂತರ ಕ್ಷಿಪಣಿಗಳ ಉಡಾವಣೆಯನ್ನೇ ತಕ್ಷಣ ಪತ್ತೆಹಚ್ಚುವ ತಂತ್ರಜ್ಞಾನ ಇದರಲ್ಲಿ ಅಳವಡಿಸಲಾಗಿದೆ. ಉಪಗ್ರಹಗಳು ಭೂಮಿಯ ಸುತ್ತ ತಟಸ್ಥವಾಗಿರದೆ ತಿರುಗುತ್ತಾ ಭದ್ರತಾ ಜಾಗೃತಿಯಲ್ಲಿ ತೊಡಗಿರುತ್ತವೆ.
ಬಹುಮಟ್ಟದ ರಕ್ಷಣಾ ಕವಚ
ಈ ವ್ಯವಸ್ಥೆ ಬಾಹ್ಯಾಕಾಶ, ಭೂಮಿ, ಸಮುದ್ರ ಹಾಗೂ ವಾಯು ಪ್ರದೇಶಗಳಾದ ನಾಲ್ಕು ಪ್ರಮುಖ ಮಟ್ಟಗಳಲ್ಲಿ ಕಾರ್ಯನಿರ್ವಹಿಸುತ್ತದೆ.
ಬಾಹ್ಯಾಕಾಶದಿಂದ: ಶತ್ರು ಕ್ಷಿಪಣಿಗಳ ಪತ್ತೆ ಮತ್ತು ನಾಶ
ಭೂಮಿಯಲ್ಲಿ: ರಾಡಾರ್ ಹಾಗೂ ಪ್ರತಿದಾಳಿ ವ್ಯವಸ್ಥೆಗಳ ಮೂಲಕ ತಡೆಯಲು
ಸಮುದ್ರದಲ್ಲಿ: ನೌಕಾನಿರೋಧಕ ವ್ಯವಸ್ಥೆಗಳ ಮೂಲಕ ರಕ್ಷಣಾ ಕಾರ್ಯ
ವಾಯುಪ್ರದೇಶದಲ್ಲಿ: ವಿಮಾನಗಳ ಮೂಲಕ ಮಧ್ಯಮ ಶ್ರೇಣಿಯ ದಾಳಿಗಳಿಗೆ ತಡೆ
ಗೋಲ್ಡನ್ ಡೋಮ್ ಏಕೆ ವಿಶೇಷ?
- ಬಾಹ್ಯಾಕಾಶದಿಂದಲೇ ಶತ್ರು ದಾಳಿಗಳ ತಡೆ
- ಕ್ಷಿಪಣಿಗಳನ್ನು ಮಾರ್ಗಮಧ್ಯದಲ್ಲಿಯೇ ನಾಶಪಡುವ ಸಾಮರ್ಥ್ಯ
- ಭೂಮಿ, ಸಮುದ್ರ ಮತ್ತು ಗಗನದಿಂದ ಸಹ ಪ್ರತ್ಯುತ್ತರದ ವ್ಯವಸ್ಥೆ
- 2029ರ ವೇಳೆಗೆ ಕಾರ್ಯಚಟುವಟಿಕೆ ಆರಂಭ ನಿರೀಕ್ಷೆ