
ಮಂಡ್ಯ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೊಂದೇಮಾದಿಹಳ್ಳಿಯಲ್ಲಿ ನಡೆದ ಅಕಸ್ಮಿಕ ಗುಂಡಿನ ದಾಳಿ ದಾರುಣ ಅನಾಹುತಕ್ಕೆ ಕಾರಣವಾಗಿದೆ. 13 ವರ್ಷದ ಬಾಲಕನೊಬ್ಬ ಆಟವಾಡುವ ವೇಳೆ ಆಕಸ್ಮಿಕವಾಗಿ ತನ್ನ 3 ವರ್ಷದ ತಮ್ಮನ ಮೇಲೆ ಗುಂಡು ಹಾರಿಸಿ ಅವನ ಸಾವಿಗೆ ಕಾರಣನಾದ ಘಟನೆ ನಡೆದಿದೆ.
ಈ ದುರ್ಘಟನೆ ನಾಗಮಂಗಲದ ಕಾಂಗ್ರೆಸ್ ಮುಖಂಡ ನರಸಿಂಹಮೂರ್ತಿಯವರ ಕೋಳಿ ಫಾರಂನಲ್ಲಿ ನಡೆದಿದೆ. ಕೋಳಿಫಾರಂನ ಭದ್ರತೆಗೆ ಅಲ್ಲಿ ಒಂದು ಅಸಲಿ ಗನ್ ಇಡಲಾಗಿತ್ತು. ಪಶ್ಚಿಮ ಬಂಗಾಳ ಮೂಲದ ಕೂಲಿ ಕಾರ್ಮಿಕ ದಂಪತಿ ಶಶಾಂಕ್ ಮತ್ತು ಲಿಪಿಕ ಈ ಕೋಳಿಫಾರಂನಲ್ಲಿ ಕೆಲಸ ಮಾಡುತ್ತಿದ್ದು, ಅವರ ಪುತ್ರ 13 ವರ್ಷದ ಸುದೀಪ್ ದಾಸ್ ಮತ್ತು 3 ವರ್ಷದ ಮಗುವನ್ನು ಆಟವಾಡಲು ಬಿಟ್ಟು ಅವರು ಕೆಲಸಕ್ಕೆ ತೆರಳಿದ್ದರು.
ಸುದೀಪ್ ಫಾರಂನಲ್ಲಿ ಇದ್ದ ಗನ್ ತೆಗೆದುಕೊಂಡು “ಕಳ್ಳ-ಪೊಲೀಸ್” ಆಟವಾಡಲು ಮುಂದಾದಾಗ ಆಕಸ್ಮಿಕವಾಗಿ ಗುಂಡು ಹಾರಿ 3 ವರ್ಷದ ಮಗುವಿನ ಹೊಟ್ಟೆಗೆ ತಗುಲಿದೆ. ಇದರಿಂದ ಮಗುವಿನ ಹೊಟ್ಟೆ ಛಿದ್ರಗೊಂಡಿದ್ದು,ಕರುಳು ಹೊರಬಂದು ತೀವ್ರ ರಕ್ತಸ್ರಾವವಾಗತೊಡಗಿದೆ. ಬಾಲಕನ ತಾಯಿ ಲಿಪಿಕ ಕೂಡ ಈ ದಾಳಿಯಲ್ಲಿ ಗಾಯಗೊಂಡಿದ್ದಾರೆ.
ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಹೊಟ್ಟೆಯ ಗಾಯದಿಂದ ತೀವ್ರ ರಕ್ತಸ್ರಾವವಾಗಿ ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ. ಈ ದುರ್ಘಟನೆಯು ಕುಟುಂಬದವರ ದುಃಖಕ್ಕೆ ಕಾರಣವಾಗಿದ್ದು, ಗ್ರಾಮಸ್ಥರೂ ಆಘಾತಗೊಂಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕೋಳಿಫಾರಂನಲ್ಲಿದ್ದ ಗನ್ ಮಕ್ಕಳಿಗೆ ಹೇಗೆ ಲಭ್ಯವಾಯಿತು? ಅದನ್ನು ಭದ್ರವಾಗಿರಿಸಿರಲಿಲ್ಲವೇ ? ಎಂಬ ಬಗ್ಗೆ ತನಿಖೆ ಆರಂಭಿಸಲಾಗಿದೆ.