
ತೆಕ್ಕಟ್ಟೆ: ಕುಂದಾಪುರ ತಾಲ್ಲೂಕಿನ ತೆಕ್ಕಟ್ಟೆ ಬಳಿ ಒಂದು ಬಡ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಮೇ 15ರಂದು ನಡೆದಿದೆ. ತಂದೆ ಮತ್ತು ಮಗ ಸಾವನ್ನಪ್ಪಿ, ತಾಯಿಯ ಸ್ಥಿತಿ ಗಂಭೀರವಾಗಿದೆ.
ಮೃತರನ್ನು ಅಂಕದಕಟ್ಟೆ ಪೆಟ್ರೋಲ್ ಬಂಕ್‌ನ ಉದ್ಯೋಗಿ ಮಾಧವ ದೇವಾಡಿಗ (56) ಮತ್ತು ಅವರ ಪುತ್ರ ಪ್ರಸಾದ್ ದೇವಾಡಿಗ (22) ಎಂದು ಗುರುತಿಸಲಾಗಿದೆ. ತಾಯಿ ತಾರಾ ದೇವಾಡಿಗ ಆತ್ಮಹತ್ಯೆ ಯತ್ನಿಸಿದ್ದು, ಅವರನ್ನು ತಕ್ಷಣವೇ ಸ್ಥಳೀಯರು ಹಾಗೂ ಕೋಟದ ಜೀವನ್ ಮಿತ್ರ ನಾಗರಾಜ್ ಅವರ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು. ಅವರ ಸ್ಥಿತಿ ಗಂಭೀರವಾಗಿದೆ.

ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲಾಗಿದ್ದು, ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮೃತ ದೇಹಗಳನ್ನು ಮೇಲಕ್ಕೆತ್ತಿದರು. ಕೋಟ ಪೊಲೀಸ್ ಠಾಣೆಯ ಸಿಬ್ಬಂದಿ ಮತ್ತು ಠಾಣಾಧಿಕಾರಿ ರಾಘವೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳೀಯರಾದ ಸಂತೋಷ್ ಶೆಟ್ಟಿ, ಶ್ರೀನಾಥ್ ಶೆಟ್ಟಿ ಮತ್ತು ಇತರರು ತಾಯಿ ತಾರಾ ದೇವಾಡಿಗರನ್ನು ರಕ್ಷಿಸಲು ಧಾವಿಸಿದ್ದರು. ಘಟನಾ ಸ್ಥಳಕ್ಕೆ ಮಲ್ಯಾಡಿ ಶಿವರಾಮ ಶೆಟ್ಟಿ, ಪುರಸಭೆ ಸದಸ್ಯ ಗಿರೀಶ್ ದೇವಾಡಿಗ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಆಗಮಿಸಿದ್ದರು.

ಮನೆಯಲ್ಲೊಂದು ಡೆತ್ ನೋಟ್ ಪತ್ತೆಯಾಗಿದ್ದು, ಹೆಚ್ಚಿದ ಸಾಲದ ಭಾರವೇ ಆತ್ಮಹತ್ಯೆಗೆ ಕಾರಣವಾಗಿದ್ದು, “ಮರ್ಯಾದೆಗೆ ಅಂಜಿ ” ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂಬ ಅರ್ಥದ ಬಗ್ಗೆಯೂ ಸೂಚನೆಗಳಿವೆ.
ಘಟನೆ ಇಡೀ ಗ್ರಾಮದ ಹೃದಯ ತಟ್ಟಿದ್ದು, ಸ್ಥಳದಲ್ಲಿ ಮೌನ ಮಡುಗಟ್ಟಿದೆ.