
ಕುಂದಾಪುರ : ಮಂಗಳವಾರ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಗಂಗೊಳ್ಳಿ ಅಳಿವೆ ಪ್ರದೇಶದ ಹೊರಭಾಗದಲ್ಲಿ ಮಗುಚಿ ಬಿದ್ದ ಪರಿಣಾಮ ಮೂವರು ಮೀನುಗಾರರು ನಾಪತ್ತೆಯಾಗಿದ್ದು, ಓರ್ವ ಮೀನುಗಾರನನ್ನು ರಕ್ಷಿಸಲಾಗಿದೆ.
ಗಂಗೊಳ್ಳಿಯ ಮೀನುಗಾರರಾದ ಸಿಪಾಯಿ ಸುರೇಶ್ ಖಾರ್ವಿ, ಜಗನ್ನಾಥ್ ಖಾರ್ವಿ ಮತ್ತು ಲೋಹಿತ್ ಖಾರ್ವಿ ನಾಪತ್ತೆಯಾದವರು. ದೋಣಿಯಲ್ಲಿದ್ದ ಸಂತೋಷ್ ಖಾರ್ವಿ ಎಂಬುವವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿ ಅಪಾಯದಿಂದ ಪಾರು ಮಾಡಿದ್ದಾರೆ.

ಮೀನುಗಾರಿಕೆಗೆ ತೆರಳಿದ್ದ ಈ ಮೀನುಗಾರರು, ಸಮುದ್ರದಲ್ಲಿ ಭಾರಿ ತೂಫಾನ್ ಎದ್ದ ಕಾರಣ ಮೀನುಗಾರಿಕೆ ನಡೆಸದೆ ವಾಪಸ್ಸಾಗುತ್ತಿದ್ದಾಗ ಗಂಗೊಳ್ಳಿ ಅಳಿವೆಯ ಹೊರ ಭಾಗದಲ್ಲಿ ದೋಣಿ ಮಗುಚಿದೆ ಎಂದು ತಿಳಿದುಬಂದಿದೆ.
ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದ್ದರೂ, ಸತತ ಗಾಳಿ ಸಹಿತ ಭಾರಿ ಮಳೆಯಿಂದಾಗಿ ಸಮುದ್ರದಲ್ಲಿ ಅಬ್ಬರದ ಅಲೆಗಳು ಏಳುತ್ತಿವೆ. ಈ ಪ್ರತಿಕೂಲ ಹವಾಮಾನವು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಸ್ಥಳೀಯ ಮೀನುಗಾರ ಮುಖಂಡ ರಾಮಪ್ಪ ಖಾರ್ವಿ ತಿಳಿಸಿದ್ದಾರೆ.