
ಬೆಂಗಳೂರು: ದಸರಾ ಉದ್ಘಾಟನೆ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಮೂವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (PIL) ಹೈಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಾಪ್ ಸಿಂಹ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಂದು ವಿಧಾನಸೌಧದಲ್ಲಿ ನಡೆದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, “ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರು ಚಾಮುಂಡಿ ಬೆಟ್ಟ ಹತ್ತಬಾರದು, ಪೂಜೆ ಮಾಡಬಾರದು ಅಂತಾರೆ. ನಾವಿರುವುದು ಜಾತ್ಯಾತೀತ ವ್ಯವಸ್ಥೆಯಲ್ಲಿ. ಸಂವಿಧಾನವು ಸಮಾನತೆಯನ್ನು ಪ್ರತಿಪಾದಿಸುತ್ತದೆ. ಅಂಬೇಡ್ಕರ್ ಇದನ್ನೇ ಹೇಳಿದ್ದಾರೆ. ಇಂತಹ ಪಟ್ಟಭದ್ರ ಹಿತಾಸಕ್ತಿಗಳನ್ನು ಸಮಾಜ ಖಂಡಿಸಬೇಕು,” ಎಂದು ಹೇಳಿದರು.
ಪ್ರತಾಪ್ ಸಿಂಹ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೆ, “ಒಬ್ಬ ಮಾಜಿ ಸಂಸದನಿಗೆ ಸಂವಿಧಾನ ಗೊತ್ತಿಲ್ಲ ಅಂದರೆ ಏನು ಹೇಳಬೇಕು? ಅವನನ್ನು ಮೂರ್ಖ ಅಂತ ಕರೆಯಬೇಕು. ಇಂತಹ ಮೂರ್ಖರು ನಮ್ಮ ದೇಶದಲ್ಲಿ ಇದ್ದಾರೆ. ರಾಜಕೀಯವನ್ನು ಬೇರೆ ವಿಷಯಗಳಲ್ಲಿ ಮಾಡಲಿ. ಇಂತಹ ವಿಷಯದಲ್ಲಿ ರಾಜಕೀಯ ಮಾಡಬಾರದು. ಜನರನ್ನ ತಪ್ಪು ದಾರಿಗೆ ಎಳೆಯುವುದು ಖಂಡನೀಯ,” ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿಯಾಗಿದ್ದು, ಈ ಕರ್ತವ್ಯವನ್ನು ಎಲ್ಲರೂ ತಪ್ಪದೇ ನಿರ್ವಹಿಸಬೇಕು. ಪ್ರಜಾಪ್ರಭುತ್ವದ ರಕ್ಷಣೆಯಿಂದ ದೇಶದ ಜನರ ರಕ್ಷಣೆ ಸಾಧ್ಯ. ಬಹುಸಂಸ್ಕೃತಿಯುಳ್ಳ ನಮ್ಮ ದೇಶದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಪಾಡಲು ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಿದೆ ಎಂದೂ ಅವರು ಪ್ರತಿಪಾದಿಸಿದರು.