
ಬೆಂಗಳೂರು: ರಾಜ್ಯ ಸರ್ಕಾರ 2025-26 ಶೈಕ್ಷಣಿಕ ಸಾಲಿನಲ್ಲೂ ಮೊದಲ ತರಗತಿಗೆ ಸೇರಿದಂತೆ ಮಕ್ಕಳ ವಯೋಮಿತಿಯಲ್ಲಿ ತಾತ್ಕಾಲಿಕ ಸಡಿಲಿಕೆ ನೀಡಿದೆ. ಇದೀಗ 5 ವರ್ಷ 5 ತಿಂಗಳು ಪೂರ್ಣಗೊಂಡ ಮಕ್ಕಳಿಗೂ 1ನೇ ತರಗತಿಗೆ ಸೇರಲು ಅವಕಾಶ ನೀಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಪೋಷಕರು ವಯೋಮಿತಿ ಬಗ್ಗೆ ಗೊಂದಲದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಈ ಶೈಕ್ಷಣಿಕ ವರ್ಷಕ್ಕೆ ಮಾತ್ರ ಎರಡು ತಿಂಗಳ ರಿಯಾಯಿತಿ ನೀಡಲಾಗಿದೆ. ಆದರೆ ಮುಂದಿನ ವರ್ಷದಿಂದ 6 ವರ್ಷ ವಯಸ್ಸು ಕಡ್ಡಾಯವಾಗಲಿದೆ. ಇದು ರಾಷ್ಟ್ರೀಯ ಶಿಕ್ಷಣ ನೀತಿಯು ತಂದಿರುವ ಬದಲಾವಣೆಗಳಲ್ಲಿ ಒಂದು” ಎಂದು ತಿಳಿಸಿದರು.
ಈ ಸಡಿಲಿಕೆ ಕೇವಲ ರಾಜ್ಯ ಪಠ್ಯಕ್ರಮ ಪಾಲಿಸುವ ಶಾಲೆಗಳಿಗಷ್ಟೇ ಅನ್ವಯವಾಗಲಿದೆ. ಸಿಬಿಎಸ್‌ಇ (CBSE) ಹಾಗೂ ಐಸಿಎಸ್‌ಸಿ (ICSE) ಬೋರ್ಡ್‌ಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.