
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ದತ್ತರಾಜಪುರ ಗ್ರಾಮದ 8 ವರ್ಷದ ರಚಿತ್ ಎಂಬ ಬಾಲಕನು ಕೆಎಫ್‌ಡಿ (ಮಂಗನ ಕಾಯಿಲೆ) ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಿಸದೆ ಮಣಿಪಾಲ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ರಚಿತ್ ಮತ್ತು ಅವನ ಸಹೋದರಿಗೆ ಸುಮಾರು 15 ದಿನಗಳ ಹಿಂದೆ ಮಂಗನ ಕಾಯಿಲೆ ದೃಢಪಟ್ಟಿತ್ತು. ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ನಂತರ ರಚಿತ್‌ನ ಸ್ಥಿತಿ ಗಂಭೀರವಾಗಿದ್ದು ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿತ್ತು. ಸಹೋದರಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, ರಚಿತ್ ಚಿಕಿತ್ಸೆ ಫಲಿಸದೆ ತಡರಾತ್ರಿ 11 ಗಂಟೆಗೆ ನಿಧನ ಹೊಂದಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಹಿಂದೆ ಫೆಬ್ರವರಿಯಲ್ಲಿ ತೀರ್ಥಹಳ್ಳಿ ತಾಲೂಕಿನ ಕೊನೇರಿಪುರ ಗ್ರಾಮದ 54 ವರ್ಷದ ಮಹಿಳೆಯೂ ಕೆಎಫ್‌ಡಿ ಸೋಂಕಿಗೆ ಬಲಿಯಾಗಿದ್ದರು. ಮಂಗನ ಕಾಯಿಲೆಯ ತಡೆಗೆ ಆರೋಗ್ಯ ಇಲಾಖೆ ಜಾಗೃತಿ ಕ್ರಮಗಳನ್ನು ಕೈಗೊಳ್ಳಬೇಕಿದೆ.