
ಉಡುಪಿ: ರಂಗಭೂಮಿ, ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪೆರ್ಡೂರು ಪ್ರಭಾಕರ ಕಲ್ಯಾಣಿ (65) ಅವರು ಇಂದು ನಿಧನರಾಗಿದ್ದಾರೆ. ಹವ್ಯಾಸಿ ರಂಗಭೂಮಿ ಕಲಾವಿದರಾದ ಅವರ ತಂದೆ ಪಿ. ರಾಮಕೃಷ್ಣ ಕಲ್ಯಾಣಿ ಅವರ ಮಾರ್ಗದರ್ಶನದಲ್ಲಿ ಬಾಲ್ಯದಿಂದಲೇ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು.
ಅವರು ವಿಜಯಾ ಬ್ಯಾಂಕಿನಲ್ಲಿ 40 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿದ್ದರು. 1993ರಲ್ಲಿ, ಪೆರ್ಡೂರಿನಲ್ಲಿ ‘ಕೂಡ್ದಿ ಕಲಾವಿದೆರ್’ ಎಂಬ ಹವ್ಯಾಸಿ ರಂಗಸಂಸ್ಥೆಯನ್ನು ಸ್ಥಾಪಿಸಿ, ಅದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಗ್ರಾಮೀಣ ಪ್ರದೇಶದಲ್ಲಿ ಹಲವಾರು ಕಲಾವಿದರಿಗೆ ಪ್ರೋತ್ಸಾಹ ನೀಡುವಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು. ಅವರು ಕನ್ನಡ ಮತ್ತು ತುಳು ನಾಟಕಗಳು, ಯಕ್ಷಗಾನ ಹಾಗೂ ಕೆಲವು ಕನ್ನಡ ಚಲನಚಿತ್ರಗಳಲ್ಲಿಯೂ ಅಭಿನಯಿಸಿದ್ದರು. ಬಿಡುಗಡೆಗೆ ಸಿದ್ಧವಾಗಿರುವ ‘ಕಾಂತಾರ 1’ ಚಿತ್ರದಲ್ಲಿಯೂ ಸಹ ಅವರು ಪಾತ್ರ ನಿರ್ವಹಿಸಿದ್ದರು.
ಪ್ರಭಾಕರ ಕಲ್ಯಾಣಿ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ. ಅವರ ನಿಧನಕ್ಕೆ ಹಲವು ಗಣ್ಯರು ಮತ್ತು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಮೃತರು, ಪತ್ನಿ, ಪುತ್ರ, ಸಹೋದರರು ಮತ್ತು ಸಹೋದರಿಯರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.