ಮುಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಶನಿವಾರ ತಡರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ರಥೋತ್ಸವದ ವೇಳೆ ರಥದ ಮೇಲ್ಬಾಗ ಕುಸಿದ ಘಟನೆ ಘಟಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ರಾತ್ರಿ 1.30ರ ಸುಮಾರಿಗೆ ರಥ ಎಳೆಯುವ ವೇಳೆ, ರಥದ ಎಡಭಾಗಕ್ಕೆ ಮೇಲ್ಬಾಗ ಕುಸಿದು ಬಿದ್ದಿದ್ದು, ಆಗ ರಥದ ಸುತ್ತಲಿದ್ದ ಭಕ್ತರು ಹಾಗೂ ಒಳಗಿದ್ದ ಅರ್ಚಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯು ಕ್ಷಣಮಾತ್ರ ಆತಂಕ ಉಂಟುಮಾಡಿದರೂ, ಯಾವುದೇ ಗಂಭೀರ ಗಾಯಗಳು ವರದಿಯಾಗಿಲ್ಲ.
ಈ ಅವಘಡದ ಬಳಿಕ, ದೇವಾಲಯದ ಚಂದ್ರಮಂಡಲ ರಥದಲ್ಲಿ ಉಳಿದ ಉತ್ಸವವನ್ನು ಕ್ರಮವಾಗಿ ನೆರವೇರಿಸಲಾಯಿತು. ದೇವಳದ ಆಡಳಿತ ಮಂಡಳಿ ಹಾಗೂ ಸ್ಥಳೀಯ ಭಕ್ತರು ಉತ್ಸವದ ಮುಂದಿನ ಭಾಗವನ್ನು ಶ್ರದ್ಧಾಭಕ್ತಿಯಿಂದ ನಡೆಸಿದರು.