
ಬೆಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆ ಮುಂದುವರಿದಿರುವ ನಡುವೆಯೇ, ನೂರಾರು ಶವಗಳನ್ನು ಹೂತಿದ್ದಾಗಿ ಆರೋಪಿಸಿದ್ದ ಅನಾಮಿಕ ದೂರುದಾರ ಇದೀಗ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದು, ದೇಗುಲದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ, “ಸ್ಥಳೀಯ ಪಂಚಾಯತ್ ಅನ್ನು ಸಂಪೂರ್ಣ ನಿರ್ಲಕ್ಷಿಸಿ, ನೇರವಾಗಿ ದೇವಸ್ಥಾನದ ಮಾಹಿತಿ ಕೇಂದ್ರದಿಂದ ನನಗೆ ಸಮಾಧಿ ಮಾಡಲು ಸೂಚನೆಗಳು ಬರುತ್ತಿದ್ದವು” ಎಂದು ಹೇಳಿದ್ದಾನೆ.
ಲೈಂಗಿಕ ದೌರ್ಜನ್ಯದ ಕುರುಹುಗಳು: 90% ಮಹಿಳೆಯರ ಶವಗಳು ಹೂತಿದ್ದ ಶವಗಳ ಸಾವಿಗೆ ನಿಖರ ಕಾರಣ ಗೊತ್ತಿಲ್ಲವಾದರೂ, ಹೆಚ್ಚಿನ ಶವಗಳ ಮೇಲೆ ಹಿಂಸೆ ಮತ್ತು ಲೈಂಗಿಕ ದೌರ್ಜನ್ಯದ ಕುರುಹುಗಳಿದ್ದವು ಎಂದು ದೂರುದಾರ ಹೇಳಿದ್ದಾನೆ. “ನಾವು ಹೂತ 100 ದೇಹಗಳಲ್ಲಿ ಸುಮಾರು 90 ಶವಗಳು ಮಹಿಳೆಯರದ್ದಾಗಿದ್ದವು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲಾ ವಯಸ್ಸಿನ ದೇಹಗಳು ಇದ್ದವು” ಎಂದು ಆತ ಹೇಳಿಕೊಂಡಿದ್ದಾನೆ.

ಸೌಜನ್ಯ ಪ್ರಕರಣದ ದಿನವೂ ಕರೆ ಬಂದಿತ್ತು 2012ರ ಸೌಜನ್ಯ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ ದೂರುದಾರ, “ಆಕೆಯ ಕೊಲೆಯಾದ ರಾತ್ರಿ ನನಗೆ ಕರೆ ಬಂದಿತ್ತು. ನಾನು ರಜೆಯಲ್ಲಿದ್ದೇನೆ ಎಂದು ಹೇಳಿದಾಗ ಅವರು ನನ್ನ ಮೇಲೆ ಕೂಗಾಡಿದರು. ಮರುದಿನ ನಾನು ಕೊಲೆಯಾದ ಹುಡುಗಿಯ ಶವ ನೋಡಿದೆ” ಎಂದಿದ್ದಾನೆ.
ಎಸ್‌ಐಟಿ ನನ್ನನ್ನು ನಂಬುತ್ತಿಲ್ಲ “ನಾನು ಎಸ್‌ಐಟಿಯನ್ನು ನಂಬುತ್ತೇನೆ, ಆದರೆ ಅವರು ನನ್ನನ್ನು ನಂಬುತ್ತಿಲ್ಲ” ಎಂದು ಹೇಳಿದ ಆತ, ತನ್ನೊಂದಿಗೆ ಶವ ಹೂಳಲು ಇದ್ದ ನಾಲ್ಕು ಜನರನ್ನು ಕೂಡ ಕರೆಸಿ ವಿಚಾರಿಸಿದರೆ ಸತ್ಯ ಬೇಗ ಹೊರಬರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾನೆ. ಸತ್ಯ ಹೊರಬರಬೇಕು ಮತ್ತು ಶವಗಳಿಗೆ ಅಂತಿಮ ವಿಧಿವಿಧಾನ ನೆರವೇರಿಸಬೇಕು ಎಂಬುದು ತನ್ನ ಉದ್ದೇಶ ಎಂದಿದ್ದಾನೆ.