spot_img

ಅಹಮದಾಬಾದ್ ವಿಮಾನ ದುರಂತದ ಹಿಂದಿನ ಅಚ್ಚರಿ: ಇಂಜಿನ್‌ಗಳಿಗೆ ಇಂಧನ ಪೂರೈಕೆ ಸ್ಥಗಿತವೇ ಕಾರಣ – AAIB ವರದಿ ಬಹಿರಂಗ!

Date:

spot_img

ನವದೆಹಲಿ: 270ಕ್ಕೂ ಅಧಿಕ ಜನರ ಸಾವಿಗೆ ಕಾರಣವಾದ ಅಹಮದಾಬಾದ್ ವಿಮಾನ ದುರಂತದ ಹಿಂದಿನ ಕಾರಣವನ್ನು ವಿಮಾನ ಅಪಘಾತಗಳ ತನಿಖಾ ಸಂಸ್ಥೆಯ (AAIB) ವರದಿ ಬಯಲು ಮಾಡಿದೆ. ಶುಕ್ರವಾರ ತಡರಾತ್ರಿ ಬಿಡುಗಡೆಯಾದ ವರದಿಯ ಪ್ರಕಾರ, ವಿಮಾನ ಹಾರಿದ ಕೆಲವೇ ಸೆಕೆಂಡುಗಳಲ್ಲಿ ಎರಡು ಇಂಜಿನ್‌ಗಳಿಗೆ ಇಂಧನ ಪೂರೈಕೆ ನಿಂತಿದ್ದು, ಅದರ ಸ್ವಿಚ್‌ಗಳು ‘RUN’ ನಿಂದ ‘CUT OFF’ ಆಗಿದ್ದವು. ಇದರಿಂದ ಇಂಧನ ಸರಬರಾಜಾಗದೆ ವಿಮಾನ ಮೇಲೆ ಹಾರಲು ಸಾಧ್ಯವಾಗಿಲ್ಲ ಎಂದು AAIB ತಿಳಿಸಿದೆ.

ಪೈಲಟ್‌ಗಳ ಸಂಭಾಷಣೆ ಮತ್ತು ಆಘಾತಕಾರಿ ಅಂಶಗಳು: ವಿಮಾನ ದುರಂತಕ್ಕೀಡಾಗುವ ಮೊದಲು ಪೈಲಟ್‌ಗಳಿಬ್ಬರ ಮಾತುಕತೆ ಬ್ಲಾಕ್‌ಬಾಕ್ಸ್‌ನಲ್ಲಿ ದಾಖಲಾಗಿದೆ. ಒಬ್ಬ ಪೈಲಟ್ ‘ಇಂಧನವನ್ನು ಏಕೆ ಆಫ್ ಮಾಡಿದ್ದೀರಿ?’ ಎಂದು ಕೇಳಿದರೆ, ಇನ್ನೊಬ್ಬ ಪೈಲಟ್ ‘ನಾನು ಮಾಡಿಲ್ಲ’ ಎಂದು ಉತ್ತರಿಸಿದ್ದಾರೆ. ಇಂಧನ ಸ್ವಿಚ್‌ಗಳನ್ನು ಮರುಚಾಲನೆ ಮಾಡಲು ಪ್ರಯತ್ನಿಸಿದರೂ, ಅವು ಸಕ್ರಿಯವಾಗಿಲ್ಲ ಎಂದು ತನಿಖಾ ವರದಿ ಹೇಳುತ್ತದೆ.

ದುರಂತದ ಸಮಯ ಮತ್ತು ಪರಿಣಾಮ: ವಿಮಾನ ಟೇಕ್ ಆಫ್ ಆದ ಕೇವಲ 30 ಸೆಕೆಂಡುಗಳ ನಂತರ ಭೀಕರವಾಗಿ ದುರಂತಕ್ಕೀಡಾಗಿದೆ. ವಿಮಾನವು 1:38:39 ಸೆಕೆಂಡ್‌ಗೆ ಟೇಕ್ ಆಫ್ ಆಗಿ, 1:39:09 ಸೆಕೆಂಡ್‌ಗೆ ಅಪಘಾತಕ್ಕೀಡಾಗಿದೆ. 1:39:05 ಸೆಕೆಂಡ್‌ಗೆ ಪೈಲಟ್‌ಗಳಲ್ಲಿ ಒಬ್ಬರು ‘ಮೇಡೇ, ಮೇಡೇ, ಮೇಡೇ’ ಎಂದು ತುರ್ತು ಸಂದೇಶ ರವಾನಿಸಿದ್ದಾರೆ. ಇಷ್ಟು ಕಡಿಮೆ ಸಮಯದಲ್ಲಿ ಎಟಿಸಿಒ ಯಾವುದೇ ಪ್ರತಿಕ್ರಿಯೆ ಪಡೆಯಲು ಸಾಧ್ಯವಾಗಿಲ್ಲ. ಅಷ್ಟರಲ್ಲಿ ವಿಮಾನ ನಿಲ್ದಾಣದ ಪಕ್ಕದ ಹಾಸ್ಟೆಲ್ ಮೇಲೆ ಅಪ್ಪಳಿಸಿದೆ.

ತನಿಖಾ ವರದಿಯ ಪ್ರಮುಖ ಅಂಶಗಳು: ಅಪಘಾತ ಸ್ಥಳದಲ್ಲಿ ಇಂಧನದ ಮಾದರಿಯನ್ನು ಸಂಗ್ರಹಿಸಿ ಡಿಜಿಸಿಎ (ನಾಗರಿಕ ವಿಮಾನಯಾನ ನಿರ್ದೇಶನಾಲಯ) ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದ್ದು, ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಕಟ್ ಆಫ್ ಆಗಿದ್ದ ಎರಡು ಸ್ವಿಚ್‌ಗಳನ್ನು ಆನ್ ಮಾಡಿದರೂ, ಒಂದು ಎಂಜಿನ್‌ಗೆ ಅಲ್ಪ ಪ್ರಮಾಣದಲ್ಲಿ ಇಂಧನ ಸಾಗಿದೆ. ಇನ್ನೊಂದಕ್ಕೆ ಸಂಪೂರ್ಣವಾಗಿ ಇಂಧನ ಸರಬರಾಜಾಗಿಲ್ಲ. ದುರಂತದ ಸ್ಥಳದಲ್ಲಿ ಸಿಕ್ಕ ಅವಶೇಷಗಳನ್ನು ಮರು ಜೋಡಿಸಿ ತನಿಖೆ ಮಾಡಲಾಗಿದ್ದು, ಇಂಧನ ಪೂರೈಕೆ ಆಗದೇ ಇರುವುದು ದುರಂತಕ್ಕೆ ಪ್ರಮುಖ ಕಾರಣ ಎಂದು AAIB ಹೇಳಿದೆ.

AAIB ಪ್ರಾಥಮಿಕವಾಗಿ ಸಿಕ್ಕ ಎಲ್ಲ ಆಧಾರಗಳ ಮೇಲೆ ಹೆಚ್ಚುವರಿ ವಿವರಗಳನ್ನು ಸಂಗ್ರಹಿಸುತ್ತಿದ್ದು, ಇಎಎಫ್‌ಆರ್‌ನಿಂದ ಡೌನ್‌ಲೋಡ್ ಮಾಡಿದ ದತ್ತಾಂಶವನ್ನು ವಿಶ್ಲೇಷಿಸಲಾಗುತ್ತಿದೆ. ತನಿಖೆಯ ಈ ಹಂತದಲ್ಲಿ, B787-8 ಮತ್ತು/ಅಥವಾ GE GEnx-1B ಎಂಜಿನ್ ನಿರ್ವಾಹಕರು ಮತ್ತು ತಯಾರಕರ ಮೇಲೆ ಯಾವುದೇ ಕ್ರಮ ಜರುಗಿಸುವ ಅಗತ್ಯವಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವಿವಿಧ ಸಾಕ್ಷಿಗಳು ಮತ್ತು ಬದುಕುಳಿದ ಪ್ರಯಾಣಿಕರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ವಿಮಾನ ಸಿಬ್ಬಂದಿ ಮತ್ತು ಪ್ರಯಾಣಿಕರ ಮರಣೋತ್ತರ ಪರೀಕ್ಷೆಯ ವರದಿಗಳ ಸಂಪೂರ್ಣ ವಿಶ್ಲೇಷಣೆ ನಡೆಸಲಾಗುವುದು. ತನಿಖಾ ತಂಡವು ಪಾಲುದಾರರಿಂದ ಪಡೆಯಲಾಗುತ್ತಿರುವ ಹೆಚ್ಚುವರಿ ಪುರಾವೆಗಳು, ದಾಖಲೆಗಳು ಮತ್ತು ಮಾಹಿತಿಯನ್ನು ಪರಿಶೀಲಿಸುತ್ತದೆ.

ವಿಮಾನದ ಮಾಹಿತಿ: ದುರಂತಕ್ಕೀಡಾದ ಏರ್ ಇಂಡಿಯಾದ ಬೋಯಿಂಗ್ 787-8 ವಿಮಾನವು ಜೂನ್ 12ರಂದು ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ ಹೊರಟಿತ್ತು. ವಿಮಾನದಲ್ಲಿ 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಇದ್ದರು. 15 ಪ್ರಯಾಣಿಕರು ಬಿಸಿನೆಸ್ ಕ್ಲಾಸ್‌ನಲ್ಲಿದ್ದರೆ, ಇಬ್ಬರು ಮಕ್ಕಳು ಸೇರಿದಂತೆ 215 ಪ್ರಯಾಣಿಕರು ಎಕಾನಮಿ ಕ್ಲಾಸ್‌ನಲ್ಲಿದ್ದರು. ಮುಖ್ಯ ಪೈಲಟ್ 15,638 ಗಂಟೆಗಳಿಗಿಂತ ಹೆಚ್ಚು ಹಾರಾಟದ ಅನುಭವ ಹೊಂದಿದ್ದರೆ, ಎರಡನೇ ಪೈಲಟ್ 3,403 ಗಂಟೆಗಳಿಗಿಂತ ಹೆಚ್ಚು ಹಾರಾಟದ ಅನುಭವ ಹೊಂದಿದ್ದರು.

15 ಪುಟಗಳ ವರದಿಯ ಸಾರಾಂಶದಲ್ಲಿರುವ ಇತರ ಅಂಶಗಳು:

  • ವಿಮಾನದ ತೂಕ ಮತ್ತು ಇಂಧನ ಸಮತೋಲನವಾಗಿತ್ತು. ವಿಮಾನದಲ್ಲಿ 54,200 ಕೆಜಿ ಇಂಧನವಿದ್ದು, ಅದರ ತೂಕ 2,13,401 ಕೆಜಿಗಳಷ್ಟಿತ್ತು.
  • ಪೈಲಟ್‌ಗಳು ಇಂಧನ ಸ್ವಿಚ್‌ಗಳು ಆಫ್ ಆದ ಬಗ್ಗೆ ಮಾತನಾಡುತ್ತಿರುವುದು ಕಾಕ್‌ಪಿಟ್ ಆಡಿಯೋದಲ್ಲಿ ದಾಖಲಾಗಿದೆ.
  • ವಿಧ್ವಂಸಕ ಕೃತ್ಯದ ಬಗ್ಗೆ ಯಾವುದೇ ಪುರಾವೆಗಳು ಇಲ್ಲ.
  • ಇಂಧನ ಸ್ವಿಚ್ ದೋಷದ ಬಗ್ಗೆ ಎಫ್‌ಎಎ ಈ ಮೊದಲೇ ಸಲಹೆ ನೀಡಿತ್ತು, ಇದನ್ನು ಏರ್ ಇಂಡಿಯಾ ಪರಿಗಣಿಸಿರಲಿಲ್ಲ.
  • ಇಬ್ಬರು ಪೈಲಟ್‌ಗಳಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ವಿಮಾನ ಹಾರಾಟದಲ್ಲಿ ಸೂಕ್ತ ತರಬೇತಿ ಪಡೆದಿದ್ದರು.
  • ಆಕಾಶದಲ್ಲಿ ವಿಮಾನ ಹಾರಾಟಕ್ಕೆ ವಾತಾವರಣ ಸ್ವಚ್ಛಂದವಾಗಿತ್ತು. ಯಾವುದೇ ಪಕ್ಷಿ ಅಥವಾ ಹವಾಮಾನ ವೈಪರೀತ್ಯ ಅಪಘಡಕ್ಕೆ ಕಾರಣವಾಗಿಲ್ಲ.
share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮುದ್ರಾಡಿ ಪ್ರೌಢಶಾಲೆಯಲ್ಲಿ “ಇಳೆಗೈಸಿರಿ” ವನಮಹೋತ್ಸವ ಕಾರ್ಯಕ್ರಮ

ಮುದ್ರಾಡಿ ಎಂ. ಎನ್.ಡಿ. ಎಸ್. ಎಂ.ಅನುದಾನಿತ ಪ್ರೌಢಶಾಲೆಯ ಕಲ್ಪನಾ ಪರಿಸರ ಸಂಘ ಮತ್ತು ಹೆಬ್ರಿ ಅರಣ್ಯ ಇಲಾಖೆಯ ಜಂಟಿ ಸಹಯೋಗದಲ್ಲಿ ನಡೆದ "ಇಳೆಗೈಸಿರಿ" ವನಮಹೋತ್ಸವ ಕಾರ್ಯಕ್ರಮದಲ್ಲಿ ಪ್ರತಿ ಮಗುವಿನ ಮನೆಗೊಂದು ಗಿಡವನ್ನು ವಿತರಿಸಲಾಯಿತು.

ಡಾರ್ಕ್ ಅಂಡರ್‌ಆರ್ಮ್ಸ್ ಸಮಸ್ಯೆಯೇ? ಕಪ್ಪಾದ ಕಂಕುಳನ್ನು ಬೆಳ್ಳಗಾಗಿಸಲು ಇಲ್ಲಿದೆ ಸುಲಭ ಮನೆಮದ್ದುಗಳು!

ಕಪ್ಪಾದ ಕಂಕುಳನ್ನು ಬೆಳ್ಳಗಾಗಿಸಲು ಕೆಲವು ಸುಲಭ ಮನೆಮದ್ದುಗಳನ್ನು ಬಳಸಬಹುದು.

ರೈಲ್ವೆ ಪ್ರಯಾಣಿಕರಿಗೆ ಹೊಸ ಯುಗ: ‘ರೈಲ್ಒನ್’ ಸೂಪರ್ ಅಪ್ಲಿಕೇಶನ್ ಬಿಡುಗಡೆ – ಒಂದೇ ವೇದಿಕೆಯಲ್ಲಿ ಎಲ್ಲಾ ಸೇವೆಗಳು!

ಭಾರತೀಯ ರೈಲ್ವೆ ತನ್ನ ಪ್ರಯಾಣಿಕರ ಅನುಭವವನ್ನು ಕ್ರಾಂತಿಕಾರಿಯಾಗಿಸಲು ವಿನ್ಯಾಸಗೊಳಿಸಲಾದ "ರೈಲ್ಒನ್" ಎಂಬ ಹೊಚ್ಚಹೊಸ 'ಸೂಪರ್ ಅಪ್ಲಿಕೇಶನ್' ಅನ್ನು ಜುಲೈ 1, 2025 ರಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬಿಡುಗಡೆ ಮಾಡಿದ್ದಾರೆ.

ಮಂಗಳೂರಿನಲ್ಲಿ 4 ಕೋಟಿ ರೂ. ಉದ್ಯೋಗ ವಂಚನೆ: ಕೆಕೋಕಾ ಕಾಯ್ದೆಯಡಿ ಇಬ್ಬರು ಆರೋಪಿಗಳ ಬಂಧನ!

ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 300ಕ್ಕೂ ಹೆಚ್ಚು ಮಂದಿಯಿಂದ ಸುಮಾರು ₹4 ಕೋಟಿಗೂ ಅಧಿಕ ವಂಚನೆ ಮಾಡಿದ ಆರೋಪದಡಿ, ಇಬ್ಬರು ಪ್ರಮುಖ ಆರೋಪಿಗಳನ್ನು ಮಂಗಳೂರು ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ.