
ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳದ ಪರಿಸರದಲ್ಲಿ ಇತ್ತೀಚಿನ ಕೆಲವು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಲಕ್ಷಾಂತರ ಹಿಂದೂಗಳ ಭಾವನೆಗೆ ಘಾಸಿ ಉಂಟು ಮಾಡುತ್ತಿದೆ. ಎಸ್.ಐ.ಟಿ. ತನಿಖೆ ನಡೆಯುತ್ತಿದ್ದಂತೆ ಹಲವಾರು ಸಮಾಜ ವಿದ್ರೋಹಿ ಹಾಗೂ ಎಡಪಂಥೀಯ ಮನಸ್ಥಿತಿಯ ಯು-ಟ್ಯೂಬರ್ ಗಳು ಮತ್ತು ಸ್ವಯಂಘೋಷಿತ ಹೋರಾಟಗಾರರು ಕೋಟ್ಯಾಂತರ ಭಕ್ತರ ಶೃದ್ದಾ ಕೇಂದ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅವಹೇಳನಕರ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚುರಪಡಿಸಿ, ಅಪಪ್ರಚಾರ ಎಸಗುತ್ತಿರುವುದನ್ನು ಉಡುಪಿ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಶ್ರೀ ಕ್ಷೇತ್ರದ ಬಗ್ಗೆ ಇರುವ ನಂಬಿಕೆ, ಧರ್ಮಾಧಿಕಾರಿಗಳ ಮುಖೇನ ನಡೆಯುತ್ತಿರುವ ಸಮಾಜಮುಖಿ ಸೇವೆಗಳ ಬಗ್ಗೆ ವ್ಯವಸ್ಥಿತ ಅಪಪ್ರಚಾರ ನಡೆಸಿ ಜನರ ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟುಮಾಡುತ್ತಿರುವ ಸಮಾಜ ಕಂಟಕರ ಷಡ್ಯಂತ್ರಕ್ಕೆ ಸರಕಾರ ತಕ್ಷಣ ಕಡಿವಾಣ ಹಾಕಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿ ಅಗ್ರಹಿಸಿದ್ದಾರೆ.
ಸರಕಾರ ಕಾನೂನಾತ್ಮಕ ನಡೆಸುವ ಎಸ್.ಐ.ಟಿ. ತನಿಖೆಗೆ ಯಾವುದೇ ಅಭ್ಯಂತರ ಇಲ್ಲ. ಆದರೆ ಇದೇ ವಿಷಯವನ್ನು ಮುಂದಿಟ್ಟುಕೊಂಡು ಅಸಂಬದ್ಧ ವಿಚಾರಗಳನ್ನು ವೈಭವೀಕರಿಸಿಕೊಂಡು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡಹುತ್ತಿರುವ ವ್ಯವಸ್ಥಿತ ಜಾಲದ ಕುತಂತ್ರದ ವಿರುದ್ಧ ಪೊಲೀಸ್ ಇಲಾಖೆ ಸ್ವಯಂಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸುವುದು ಅತ್ಯವಶ್ಯಕ.
ಸರಕಾರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್.ಐ.ಟಿ. ತನಿಖೆಯ ವರದಿಯನ್ನು ಶೀಘ್ರ ಬಿಡುಗಡೆಗೊಳಿಸಿ, ಸತ್ಯಾಂಶವನ್ನು ಜನತೆಯ ಮುಂದಿಡಬೇಕು. ಕರಾವಳಿಯ ಪ್ರತೀ ಮನೆಗಳು ಧಾರ್ಮಿಕ ಅಸ್ಮಿತೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದು, ಧಾರ್ಮಿಕ ಶೃದ್ದಾ ನಂಬಿಕೆಗೆ ಧಕ್ಕೆಯುಂಟಾದರೆ ಯಾವುದೇ ಬೆಲೆ ತೆತ್ತು ಅದನ್ನು ಉಳಿಸಿಕೊಳ್ಳಲು ಜನತೆ ಶಕ್ತರಾಗಿದ್ದಾರೆ. ಸರಕಾರ ತಕ್ಷಣ ಎಚ್ಛೆತ್ತು ಅಪಪ್ರಚಾರದಲ್ಲಿ ತೊಡಗಿರುವ ಸಮಾಜ ಕಂಟಕರ ವಿರುದ್ಧ ಕೂಲಂಕುಶ ತನಿಖೆ ನಡೆಸಿ ಸಮಾಜಕ್ಕೆ ಅಂಟಿಕೊಂಡಿರುವ ಅನಿಷ್ಟ ಹಾವಳಿಯನ್ನು ಪರಿಹರಿಸಬೇಕು. ಈ ನಿಟ್ಟಿನಲ್ಲಿ ಯಾವುದೇ ಸಕಾರಾತ್ಮಕ ಪ್ರಗತಿ ಕಾಣದೇ ಇದ್ದಲ್ಲಿ ಬಿಜೆಪಿ ಜನ ಬೆಂಬಲದೊಂದಿಗೆ ಜನಪರ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.