
ಬೆಂಗಳೂರು: ರಾಜ್ಯದ ಖಜಾನೆ ತುಂಬಿ ತುಳುಕುತ್ತಿದೆ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಾರಿಗೆ ನೌಕರರ ವೇತನ ಬಾಕಿ ನೀಡಲು ಸಾಧ್ಯವಾಗುತ್ತಿಲ್ಲ. ಈ ವಿಷಯದಲ್ಲಿ ಅವರು ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸಿ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತೀವ್ರವಾಗಿ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಗಣೇಶೋತ್ಸವದಲ್ಲಿ ಕಲ್ಲು ತೂರಾಟ, ಹುಬ್ಬಳ್ಳಿ ಪೊಲೀಸ್ ಠಾಣೆ ದಾಳಿ, ಡಿಜೆ ಹಳ್ಳಿ-ಕೆಜೆ ಹಳ್ಳಿ ಪ್ರಕರಣಗಳ ಆರೋಪಿಗಳನ್ನು ಕ್ಷಮಿಸುತ್ತೀರಿ. ಆದರೆ, ಸಾರಿಗೆ ನೌಕರರಿಗೆ ಮಾತ್ರ ಎಸ್‌ಎಂಎ ಜಾರಿ ಮಾಡುವುದಾಗಿ ಎಚ್ಚರಿಕೆ ನೀಡುತ್ತೀರಿ. ನಿಮ್ಮ ರಾಜಕೀಯ ಕೇವಲ ವೋಟ್ ಬ್ಯಾಂಕ್ ಆಧಾರಿತ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಆದ್ಯತೆಗಳ ಬಗ್ಗೆ ಪ್ರಶ್ನೆ
ನೌಕರರ ಬಗ್ಗೆ ಸರ್ಕಾರಕ್ಕೆ ಕರುಣೆಯೇ ಇಲ್ಲ ಎಂದು ಸಿ.ಟಿ. ರವಿ ಆಪಾದಿಸಿದರು. “ಮುಖ್ಯಮಂತ್ರಿಗಳ ಕಾಫಿ-ಟೀಗೆ ದಿನಕ್ಕೆ 11 ಲಕ್ಷ ರೂ. ಖರ್ಚು ಮಾಡುತ್ತೀರಿ. ಹೆಲಿಕಾಪ್ಟರ್ ಪ್ರಯಾಣ ಕಡಿಮೆ ಮಾಡಿಲ್ಲ. ಸಾಧನಾ ಸಮಾವೇಶಕ್ಕೆ ಜನರಿಗೆ ಹಣ ಕೊಟ್ಟು ಕೋಟಿಗಟ್ಟಲೆ ಖರ್ಚು ಮಾಡಿದ್ದೀರಿ. ಆದರೆ ನೌಕರರಿಗೆ ಮಾತ್ರ ಸಂಯಮದ ಪಾಠ ಮಾಡುತ್ತೀರಿ. 38 ತಿಂಗಳ ವೇತನ ಬಾಕಿಯಲ್ಲಿ 26 ತಿಂಗಳಿಂದ ನೀವೇ ಅಧಿಕಾರದಲ್ಲಿದ್ದೀರಿ. ಹಾಗಾದರೆ ನಿಮ್ಮ ಬದ್ಧತೆ ಏನು?” ಎಂದು ಸಿ.ಟಿ.ರವಿ ಪ್ರಶ್ನಿಸಿದರು.
ಸಚಿವ ಮಹದೇವಪ್ಪ ವಿರುದ್ಧ ಆಕ್ರೋಶ
ಸಚಿವ ಮಹದೇವಪ್ಪ ಅವರ ಟಿಪ್ಪು ಕುರಿತ ಹೇಳಿಕೆಯನ್ನೂ ಸಿ.ಟಿ. ರವಿ ಖಂಡಿಸಿದರು. “ಕೆಆರ್‌ಎಸ್ ಡ್ಯಾಂಗೆ ಟಿಪ್ಪು ಸುಲ್ತಾನ್ ಅಡಿಪಾಯ ಹಾಕಿದ್ದಕ್ಕೆ ಯಾವುದೇ ದಾಖಲೆ ಇಲ್ಲ. ಸಚಿವ ಮಹದೇವಪ್ಪ ಇತಿಹಾಸ ತಿರುಚುವ ಕೆಲಸ ಮಾಡಿದ್ದಾರೆ. ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು, ಇಲ್ಲವಾದರೆ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು,” ಎಂದು ಒತ್ತಾಯಿಸಿದರು.